ವಾರಂಗಲ್ (ತೆಲಂಗಾಣ): ಒಂಬತ್ತು ತಿಂಗಳ ಹೆಣ್ಣುಮಗುವಿನ ಮೇಲೆ ನೆರೆಮನೆಯ ಯುವಕ ಅತ್ಯಾಚಾರಕ್ಕೆ ಯತ್ನಿಸಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ಬುಧವಾರ ನಡೆದಿದೆ.
ಮನೆಯ ತಾರಸಿ ಮೇಲೆ ಪೋಷಕರೊಂದಿಗೆ ಮಲಗಿದ್ದ ಮಗುವನ್ನು 28 ವರ್ಷದ ನೆರೆಮನೆಯಾತ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಜೋರಾಗಿ ಅಳುತ್ತಿದ್ದಾಗ ಬಾಯಿ ಒತ್ತಿಹಿಡಿದ ಪರಿಣಾಮ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ನಾಪತ್ತೆಯಾದ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅನುಮಾನಗೊಂಡ ಪೊಲೀಸರು ನೆರೆಮನೆಯಾತನನ್ನು ತನಿಖೆಗೊಳಪಡಿಸಿದಾಗ ಮಗುವಿನ ದೇಹ ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದರು.
ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಮಗುವಿನ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದ್ದು, ಲೈಂಗಿಕ ದೌರ್ಜನ್ಯ ಆಗಿದೆಯೇ ಇಲ್ಲವೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಿದೆ.