ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸರ್ಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಶೇ.5.5ರಿಂದ ಶೇ.24ಕ್ಕೆ ಏರಿಕೆ

Published 7 ಡಿಸೆಂಬರ್ 2023, 7:50 IST
Last Updated 7 ಡಿಸೆಂಬರ್ 2023, 7:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವಲ್ಲಿ ಸುಧಾರಣೆ ಕಂಡುಬಂದಿದ್ದು, 2017–18ರಲ್ಲಿ ಶೇ.5.5ರಷ್ಟಿದ್ದ ಇಂಟರ್ನೆಟ್ ಸಂಪರ್ಕವು 2021–22ರಲ್ಲಿ ಶೇ.24.2ಕ್ಕೆ ಏರಿಕೆಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಚಂಡೀಗಢವನ್ನು ಹೊರತುಪಡಿಸಿದರೆ ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಇಂಟರ್ನೆಟ್‌ ಸಂಪರ್ಕ ಕಲ್ಪಿಸಿರುವ ರಾಜ್ಯ ದೆಹಲಿ ಮಾತ್ರ ಎಂದು ಸಚಿವಾಲಯ ಮಾಹಿತಿ ನೀಡಿದೆ. ದೆಹಲಿ ನಂತರ ಕೇರಳ(ಶೇ. 94.6) ಮತ್ತು ಗುಜರಾತ್ (ಶೇ. 94.2) ಈ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿವೆ.

ರಾಜಸ್ಥಾನದಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಸರ್ಕಾರಿ ಶಾಲೆಗಳು ಇಂಟರ್ನೆಟ್‌ ಸಂಪರ್ಕ ಹೊಂದಿದ್ದರೆ, ಬಿಹಾರ (ಶೇ. 5.9), ಒಡಿಶಾ (ಶೇ. 8.1) ಮತ್ತು ತೆಲಂಗಾಣ (ಶೇ. 9.2)ದಲ್ಲಿ ಶೇ.10ಕ್ಕಿಂತ ಕಡಿಮೆ ಶಾಲೆಗಳು ಇಂಟರ್ನೆಟ್‌ ಸಂಪರ್ಕ ಹೊಂದಿವೆ.

ಶಾಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಸ್ಸಾಂ (ಶೇ. 1.5 ರಿಂದ ಶೇ. 10.3), ಬಿಹಾರ (ಶೇ. 1.4 ರಿಂದ ಶೇ. 5.9), ಕರ್ನಾಟಕ (ಶೇ. 2.1 ರಿಂದ ಶೇ. 10.7), ಮಿಜೋರಾಂ (ಶೇ.3.7ರಿಂದ ಶೇ. 6 ) ಮತ್ತು ಉತ್ತರ ಪ್ರದೇಶ (ಶೇ 0.8 ರಿಂದ ಶೇ. 8.8) ರಾಜ್ಯಗಳು ಹಿಂದೆ ಬಿದ್ದಿವೆ.

ಅದರಂತೆ ನಾಗಾಲ್ಯಾಂಡ್ (ಶೇ.1.8 ರಿಂದ ಶೇ. 43.4), ಛತ್ತೀಸಗಢ (ಶೇ.1 ರಿಂದ 33.8), ಆಂಧ್ರ ಪ್ರದೇಶ ( ಶೇ. 4.7 ರಿಂದ ಶೇ. 45), ಜಮ್ಮು ಮತ್ತು ಕಾಶ್ಮೀರ (ಶೇ.1.3 ದಿಂದ 22.3), ಜಾರ್ಖಂಡ್ (ಶೇ.2.7 ರಿಂದ ಶೇ.33.6) ರಾಜ್ಯಗಳಲ್ಲಿ ಈ ಅವಧಿಯಲ್ಲಿ ವೇಗದ ಬೆಳವಣಿಗೆ ಕಂಡಿದೆ.

‘ಕಳೆದ ಐದು ವರ್ಷಗಳಲ್ಲಿ ಐಸಿಟಿ ಘಟಕ ಸ್ಥಾಪನೆಗೆ ಕೇಂದ್ರವು ₹2,443.02 ಕೋಟಿ ಬಿಡುಗಡೆ ಮಾಡಿದೆ. ಎಲ್ಲ ಶಾಲೆಗಳಲ್ಲಿ ಇಂಟರ್ ನೆಟ್‌ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT