ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಬಗ್ಗೆ ವಿವಾದಾತ್ಮಕ ಹೇಳಿಕೆ: ಅಮೋಘ ಲೀಲಾ ದಾಸ್‌ಗೆ ಇಸ್ಕಾನ್‌ನಿಂದ ನಿಷೇಧ

Published 12 ಜುಲೈ 2023, 16:14 IST
Last Updated 12 ಜುಲೈ 2023, 16:14 IST
ಅಕ್ಷರ ಗಾತ್ರ

ನವದೆಹಲಿ: ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರವಚನಕಾರ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್ ಒಂದು ತಿಂಗಳ ನಿಷೇಧ ವಿಧಿಸಿದೆ.

ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್‌ನ (ಇಸ್ಕಾನ್) ಸನ್ಯಾಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಮತ್ತು ಪ್ರೇರಣೆ ಕುರಿತಾದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಖ್ಯಾತಿ ಗಳಿಸಿರುವ ಅಮೋಘ ಲೀಲಾ ದಾಸ್, ‘ದಿವ್ಯ ಪುರುಷ’ ಮೀನು ತಿನ್ನಬಹುದೇ ಎಂದು ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಲೇವಡಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಅಮೋಘ ಲೀಲಾ ದಾಸ್ ಅವರನ್ನು ಒಂದು ತಿಂಗಳ ಕಾಲ ನಿಷೇಧಿಸಲಾಗಿದೆ ಎಂದು ಇಸ್ಕಾನ್ ತಿಳಿಸಿದೆ.

ಏನಿದು ವಿವಾದ: ಪ್ರವಚನವೊಂದರಲ್ಲಿ ಮಾತನಾಡಿದ್ದ ಅಮೋಘ ಲೀಲಾ ದಾಸ್, ‘ಯಾರಾದರೂ ದೈವಿಕ ವ್ಯಕ್ತಿ ಪ್ರಾಣಿಯನ್ನು ಕೊಂದು ತಿನ್ನುತ್ತಾರಾ? ಅವರು ಮೀನು ತಿನ್ನುತ್ತಾರಾ..? ಮೀನಿಗೂ ನೋವು ಉಂಟಾಗುತ್ತದೆ. ಮತ್ತು ವಿವೇಕಾನಂದರು ಮೀನು ತಿಂದಿದ್ದರೆ, ದೈವಿಕ ವ್ಯಕ್ತಿಗೆ ಸಾಧ್ಯವೇ ಎಂಬುದು ಪ್ರಶ್ನೆ. ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಹಾಗೆ, ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ ಎಂದು ಅವರು ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ ಅಥವಾ ಅವರು ಭಗವದ್ಗಿತೆ ಅಧ್ಯಯನಕ್ಕಿಂತ ಫುಟ್‌ಬಾಲ್ ಆಡುವುದು ಮುಖ್ಯ ಎಂದು ಹೇಳಬಹುದೇ? ಇದು ಸರಿಯಲ್ಲ. ಆದರೆ ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ನಾನು ಹೇಳಲೇಬೇಕು. ಅವರು ಇಲ್ಲಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ, ಅವರು ಹೇಳುವ ಪ್ರತಿಯೊಂದನ್ನೂ ನಾವು ಕುರುಡಾಗಿ ನಂಬಬಾರದು’ ಎಂದು ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇಸ್ಕಾನ್ ಆಕ್ಷೇಪ: ಅಮೋಘ ಅವರ ಹೇಳಿಕೆ ಅಗೌರವಯುತವಾಗಿರುವುದು ಮಾತ್ರವಲ್ಲದೆ, ‘ಆಧ್ಯಾತ್ಮಿಕ ಮಾರ್ಗಗಳ ವೈವಿಧ್ಯತೆ ಮತ್ತು ವೈಯಕ್ತಿಕ ಆಯ್ಕೆಗಳ’ ಬಗ್ಗೆ ಅರಿವಿನ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಇಸ್ಕಾನ್ ಹೇಳಿದೆ.

‘ಅಮೋಘ ಲೀಲಾ ದಾಸ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಸ್ಕಾನ್‌ನ ಮೌಲ್ಯಗಳು ಮತ್ತು ಬೋಧನೆಗಳನ್ನು ಪ್ರತಿನಿಧಿಸುವುದಿಲ್ಲ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ. ನಮ್ಮ ಸಂಸ್ಥೆ ಯಾವಾಗಲೂ ಎಲ್ಲಾ ಆಧ್ಯಾತ್ಮಿಕ ಮಾರ್ಗಗಳು ಮತ್ತು ಸಂಪ್ರದಾಯಗಳ ಕಡೆಗೆ ಸಾಮರಸ್ಯ, ಗೌರವ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಯಾವುದೇ ರೀತಿಯ ಅಗೌರವವನ್ನು ಅಥವಾ ಇತರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಕಡೆಗೆ ಅಸಹಿಷ್ಣುತೆಯನ್ನು ನಾವು ಖಂಡಿಸುತ್ತೇವೆ’ ಎಂದೂ ಇಸ್ಕಾನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೋಘ ಲೀಲಾ ದಾಸ್ ಯಾರು?

ಧರ್ಮ ಮತ್ತು ಪ್ರೇರಕ ಪ್ರವಚನಕಾರರಾಗಿರುವ ಅಮೋಘ ಲೀಲಾ ದಾಸ್, ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 43 ವರ್ಷದ ಅವರು ಪ್ರಸ್ತುತ ಇಸ್ಕಾನ್ ದ್ವಾರಕಾದ ದ್ವೇಕಾ ಅಧ್ಯಾಯದ ಉಪಾಧ್ಯಕ್ಷರಾಗಿದ್ದಾರೆ. ವರದಿಗಳ ಪ್ರಕಾರ, ಅವರ ಮೂಲ ಹೆಸರು ಆಶಿಶ್ ಅರೋರಾ. ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮುನ್ನ ಅವರು ಎಂಜಿನಿಯರ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT