ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವಸಹಿತ ಗಗನಯಾನದ ಮೇಲೆ ಇಸ್ರೊ ಗಮನ

Published 15 ಜುಲೈ 2023, 23:30 IST
Last Updated 15 ಜುಲೈ 2023, 23:30 IST
ಅಕ್ಷರ ಗಾತ್ರ

ಚೆನ್ನೈ: ‘ಚಂದ್ರಯಾನ–3’ರ ಯಶಸ್ವಿ ಉಡ್ಡಯನದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ದೇಶದ ಮೊದಲ ಮಾನವಸಹಿತ ‘ಗಗನಯಾನ’ದ ಮೇಲೆ ಗಮನ ಕೇಂದ್ರೀಕರಿಸಿದೆ.

‘ಗಗನಯಾನ’ ನೌಕೆಯನ್ನು ಮುಂದಿನ ವರ್ಷ ಶ್ರೀಹರಿಕೋಟಾದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದಲೇ ಉಡ್ಡಯನ ಮಾಡಲಾಗುತ್ತದೆ ಎಂದು ಇಸ್ರೊ ಮೂಲಗಳು ಹೇಳಿವೆ.

ಮೂವರು ಗಗನಯಾತ್ರಿಗಳನ್ನು ಹೊತ್ತ ನೌಕೆಯನ್ನು ಭೂಮಿಯಿಂದ 400 ಕಿ.ಮೀ. ಅಂತರದ ಕೆಳಕಕ್ಷೆಗೆ ಕಳುಹಿಸಲಾಗುವುದು. 3–4 ದಿನಗಳ ಕಾಲ ನೌಕೆಯು ಈ ಕಕ್ಷೆಯಲ್ಲಿ ಪರಿಭ್ರಮಿಸಲಿದೆ ಎಂದು ಇವೇ ಮೂಲಗಳು ಹೇಳಿವೆ.

‘ಗಗನಯಾನದ ಭಾಗವಾಗಿ ಆಗಸ್ಟ್‌ ಅಂತ್ಯಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ ನೆರವೇರಿಸಲಾಗುವುದು’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

‘ಚಂದ್ರಯಾನ–3’ ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಿರುವ ‘ಎಲ್‌ವಿಎಂ3’, ಇಸ್ರೊದ ಅತ್ಯಂತ ನಂಬಲರ್ಹ ರಾಕೆಟ್‌ ಎನಿಸಿಕೊಂಡಿದೆ. ಮಾನವಸಹಿತ ಆಕಾಶಯಾನಕ್ಕೆ ಬೇಕಾದ ಮಾರ್ಪಾಡುಗಳೊಂದಿಗೆ ‘ಗಗನಯಾನ’ದಲ್ಲಿ ಕೂಡ ಇದೇ ರಾಕೆಟ್‌ ಬಳಸಿಕೊಳ್ಳಲಾಗುತ್ತದೆ. ಇದನ್ನು ‘ಎಚ್‌ಎಲ್‌ವಿಎಂ3’ ಎನ್ನಲಾಗುತ್ತದೆ’ ಎಂದು ಚಂದ್ರಯಾನ–3ರ ಯೋಜನಾ ನಿರ್ದೇಶಕ ಮೋಹನ್‌ಕುಮಾರ್ ಹೇಳಿದ್ದಾರೆ.

ಮಹತ್ವದ ಹಂತ ಆರಂಭ : ಎಸ್‌.ಉಣ್ಣಿಕೃಷ್ಣನ್ ನಾಯರ್

ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡ್ಡಯನ ಮಾಡಲಾಗಿರುವ ‘ಚಂದ್ರಯಾನ–3’ ನೌಕೆ ಚಂದ್ರನ ಕಕ್ಷೆ ಸೇರುವುದಕ್ಕೂ ಮುನ್ನ 40 ದಿನಗಳ ಮಹತ್ವದ ಹಂತ ದಾಟಲಿದೆ. ಭೂಕಕ್ಷೆ ದಾಟಿ ಚಂದ್ರನಲ್ಲಿ ಇಳಿಯಲು ಪ್ಯೊಪಲ್ಷನ್‌ ಮಾಡ್ಯೂಲ್‌ಗೆ ನೂಕುಬಲ ಬೇಕು. ಈ ಉದ್ದೇಶಕ್ಕಾಗಿಯೇ ಅಳವಡಿಸಲಾಗಿರುವ ಯಂತ್ರಗಳ (ಥ್ರಸ್ಟರ್‌) ಕಾರ್ಯಾಚರಣೆಗೆ ಇಂದಿನಿಂದ ಚಾಲನೆ ನೀಡಿ ಅಗತ್ಯ ನೂಕುಬಲ ಸಿಗುವಂತೆ ಮಾಡಲಾಗುತ್ತದೆ’ ಎಂದು ಇಲ್ಲಿನ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್‌.ಉಣ್ಣಿಕೃಷ್ಣನ್ ನಾಯರ್ ಶನಿವಾರ ಹೇಳಿದ್ದಾರೆ.

ರಾಕೆಟ್‌ಗಳನ್ನು ಮಕ್ಕಳಂತೆ ಕಾಣುತ್ತೇನೆ: ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌

ರಾಕೆಟ್‌ಗಳೊಂದಿಗೆ ತಮಗಿರುವ ಭಾವನಾತ್ಮಕ ಸಂಬಂಧ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ‘ನಾನು ಅವುಗಳನ್ನು ಮಕ್ಕಳಂತೆ ಕಾಣುತ್ತೇನೆ’ ಎಂದಿದ್ದಾರೆ. ಐಐಟಿ–ಹೈದರಾಬಾದ್‌ನಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ‘ಒಬ್ಬ ವಿಜ್ಞಾನಿ ಹಾಗೂ ಎಂಜಿನಿಯರ್‌ ಆಗಿ ನನಗೆ ರಾಕೆಟ್‌ಗಳ ಬಗ್ಗೆ ಪ್ರೀತಿ ಇದೆ. ಅವುಗಳನ್ನು ಮಕ್ಕಳಂತೆಯೇ ಭಾವಿಸುವೆ. ಮಕ್ಕಳು ಜನಿಸುವುದು ಬೆಳೆದು ದೊಡ್ಡವರಾಗುವುದು ಬೆಳವಣಿಗೆ ಹಂತದಲ್ಲಿ ತೊಂದರೆಗಳು ಕಂಡುಬರುವಂತೆ ಇವುಗಳ ವಿಷಯದಲ್ಲಿಯೂ ಇಂತಹ ವಿದ್ಯಮಾನ ಕಾಣುತ್ತೇನೆ’ ಎಂದರು.

‘ಸಾಪ್ಟ್‌ ಲ್ಯಾಂಡಿಂಗ್’ ಎದುರು ನೋಡುತ್ತಿರುವ ‘ಸಿಟಿಟಿಸಿ’

ಚಂದ್ರಯಾನ– 3 ಕಾರ್ಯಕ್ರಮದ ಗಗನನೌಕೆಯು ಚಂದ್ರನ ಮೇಲೆ ‘ಸಾಫ್ಟ್‌ ಲ್ಯಾಂಡಿಂಗ್‌’ ಆಗುವುದನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಇಲ್ಲಿರುವ ಸೆಂಟ್ರಲ್ ಟೂಲ್‌ ರೂಮ್ ಮತ್ತು ಟ್ರೇನಿಂಗ್‌ ಸೆಂಟರ್‌ನ (ಸಿಟಿಟಿಸಿ) ತಂತ್ರಜ್ಞರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸನ್ನು ನೋಡಲು ಹೆಚ್ಚೇ ಉತ್ಸುಕರಾಗಿದ್ದಾರೆ. ಸಂಸ್ಥೆಯು ಈ ಕಾರ್ಯಕ್ರಮಕ್ಕೆ ಅಗತ್ಯವಿದ್ದ ತಾಂತ್ರಿಕ ನೆರವನ್ನು ಇಸ್ರೊಗೆ ನೀಡಿರುವುದೇ ಇದಕ್ಕೆ ಕಾರಣ. ‘ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಂತೆ ನಮ್ಮ ಮನಃಸ್ಥಿತಿ ಇದೆ. ಈ ಬಾರಿ ಭಾರತವು ಇತಿಹಾಸ ನಿರ್ಮಿಸುವ ಬಗ್ಗೆ ನಾವು ಆಶಾಭಾವ ಹೊಂದಿದ್ದೇವೆ’ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎಲ್‌. ರಾಜಶೇಖರ್‌ ಹೇಳಿದ್ದಾರೆ.

ಎಸ್‌.ಸೋಮನಾಥ್‌
ಎಸ್‌.ಸೋಮನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT