ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಪತ್ರೆ ಮೇಲಿನ ದಾಳಿ | ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ: ಕಲ್ಕತ್ತ ಹೈಕೋರ್ಟ್‌

Published : 16 ಆಗಸ್ಟ್ 2024, 15:14 IST
Last Updated : 16 ಆಗಸ್ಟ್ 2024, 15:14 IST
ಫಾಲೋ ಮಾಡಿ
Comments

ಕೋಲ್ಕತ್ತ: ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮೇಲೆ ನಡೆದ ಗುಂಪು ದಾಳಿ ಮತ್ತು ಹಿಂಸಾಚಾರವನ್ನು ತಡೆಯುವಲ್ಲಿ ಪಶ್ಚಿಮ ಬಂಗಾಳದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಈ ಘಟನೆ ಸಂಬಂಧ ನೈಜ ಅಂಶಗಳಿಂದ ಕೂಡಿದ ಪೂರ್ಣ ವಿವರಗಳನ್ನು ಪೊಲೀಸರು ಮತ್ತು ಆಸ್ಪತ್ರೆ ಆಡಳಿತ ಮಂಡಳಿ ಪ್ರತ್ಯೇಕವಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

‘ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಪೊಲೀಸರೂ ಗಾಯಗೊಂಡಿದ್ದಾರೆ ಮತ್ತು ದಾಳಿ ನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗಿಲ್ಲ ಎಂದರೆ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎಂದೇ ಅರ್ಥ’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಶಿವಜ್ಞಾನಂ, ನ್ಯಾಯಮೂರ್ತಿ ಹಿರಣ್ಮಯ್‌ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠ ಖಾರವಾಗಿ ಹೇಳಿದೆ.

‘ನಂಬಲು ಆಗದು’:

‘ಪೊಲೀಸ್‌ ಇಲಾಖೆಯಲ್ಲೇ ಗುಪ್ತಚರ ವಿಭಾಗ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಜನರು ಸೇರುವುದಿದ್ದರೆ ಅದರ ಮಾಹಿತಿ ಅವರಿಗಿರುತ್ತದೆ. ಆದರೆ 7,000ಕ್ಕೂ ಹೆಚ್ಚು ಜನರು ಗುಂಪು ಸೇರಿದ್ದರ ಬಗ್ಗೆ ಗುಪ್ತಚರ ವಿಭಾಗಕ್ಕೆ ಮಾಹಿತಿ ಇರಲಿಲ್ಲ ಎಂಬುದನ್ನು ನಂಬಲು ಆಗುವುದಿಲ್ಲ. ಇದು ಆಡಳಿತದ ಯಂತ್ರದ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ’ ಎಂದು ಪೀಠ ಕಿಡಿಕಾರಿದೆ.

‘ಆಸ್ಪತ್ರೆ ಮೇಲಿನ ಹಿಂಸಾತ್ಮಕ ದಾಳಿಯು, ಪ್ರತಿಭಟನನಿರತ ವೈದ್ಯರ ಮನಸ್ಥಿತಿ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ರಕ್ಷಣೆ ನೀಡದಿದ್ದರೆ ಅವರು ತಮ್ಮ ಕರ್ತವ್ಯವನ್ನು ಹೇಗೆ ನಿರ್ವಹಿಸುತ್ತಾರೆ‘ ಎಂದು ಪೀಠ ಪ್ರಶ್ನಿಸಿದೆ.

‘ಇದು ಪೂರ್ವ ಯೋಜಿತ ದಾಳಿಯಾಗಿದ್ದು, ಇದಕ್ಕಾಗಿ ಲಾರಿಗಳ ಮೂಲಕ ಜನರನ್ನು ತಂದು ಆಸ್ಪತ್ರೆ ಬಳಿ ಬಿಡಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಪರ ವಕೀಲರು ಪ್ರತಿಪಾದಿಸಿದರು.

ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ತನಿಖೆಯ ಪ್ರಗತಿ ಕುರಿತು ಮಧ್ಯಂತರ ವರದಿ ಸಲ್ಲಿಸುವಂತೆ ನಿರ್ದೇಶಿಸಿದ ಪೀಠ, ಮುಂದಿನ ವಿಚಾರಣೆಯನ್ನು ಇದೇ 21ಕ್ಕೆ ನಿಗದಿಪಡಿಸಿತು. 

‌ಆಸ್ಪತ್ರೆ ಮುಚ್ಚಿಸಲು ಆದೇಶಿಸಬಹುದು: ಸಿಜೆ

‘ಆಸ್ಪತ್ರೆಯ ಸಭಾಂಗಣದ ನವೀಕರಣದ ತುರ್ತು ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ‘ಹಾಗಾದರೆ ನಾನು ಆಸ್ಪತ್ರೆಯನ್ನು ಮುಚ್ಚಿಸಿ ಅಲ್ಲಿನ ರೋಗಿಗಳನ್ನು ಇತರ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಆದೇಶಿಸಬಹುದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿದಾರರೊಬ್ಬರ ಪರ ಹಾಜರಾದ ಹಿರಿಯ ವಕೀಲ ಬಿಕಾಸ್‌ ರಂಜನ್‌ ಭಟ್ಟಾಚಾರ್ಯ ಅವರು ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಘಟನೆ ನಡೆದಿರುವ ಆಸ್ಪತ್ರೆಯ ನಾಲ್ಕನೇ ಮಹಡಿಯ ಸೆಮಿನಾರ್‌ ಸಭಾಂಗಣದ ಭಾಗವೊಂದರ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ನವೀಕರಣ ಕಾರ್ಯವನ್ನು ನಿಲ್ಲಿಸಲಾಗಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ವಕೀಲರು ವೈದ್ಯರ ಬಹು ದಿನಗಳ ಬೇಡಿಕೆಯ ಮೇರೆಗೆ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಇದನ್ನು ಮಾಡುತ್ತಿದೆ. ಅದಾಗ್ಯೂ ಅಪರಾಧ ನಡೆದ ಸ್ಥಳ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದಾಗ ಆಕ್ರೋಶಗೊಂಡ ಮುಖ್ಯ ನ್ಯಾಯಮೂರ್ತಿಯವರು ‘ಹಾಗಾದರೆ ನಾನು ಆಸ್ಪತ್ರೆಯನ್ನು ಮುಚ್ಚಿಸಲು ಆದೇಶಿಸಬಹುದು’ ಎಂದರು

19 ಜನರ ಬಂಧನ

ಆಸ್ಪತ್ರೆ ಮೇಲೆ ನಡೆದ ದಾಳಿ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 19 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ನಗರದ ನ್ಯಾಯಾಲಯವು ಇದೇ 22ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ ಎಂದು ಕೋಲ್ಕತ್ತ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸೇವೆ ಸ್ಥಗಿತ: ಐಎಂಎ

ನವದೆಹಲಿ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಮೇಲಿನ ದಾಳಿಯನ್ನು ಖಂಡಿಸಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳು ತುರ್ತು ಸೇವೆ ಹೊರತುಪಡಿಸಿದ ಸೇವೆಗಳನ್ನು ರಾಷ್ಟ್ರದಾದ್ಯಂತ ಸ್ಥಗಿತಗೊಳಿಸುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.

ಕೋಟ್‌ ಆಸ್ಪತ್ರೆ ಮೇಲಿನ ದಾಳಿಯಲ್ಲಿ ವಿರೋಧ ಪಕ್ಷಗಳ ಕೈವಾಡವಿದೆ ಎಂದಿರುವ ಮಮತಾ ದೀದಿ ಅವರು ಅಪರಾಧಿಗಳನ್ನು ರಕ್ಷಿಸುತ್ತಿರುವಂತಿದೆ. ಮಹಿಳೆಯರ ಸುರಕ್ಷತೆ ತ್ವರಿತ ವಿಚಾರಣೆ ನ್ಯಾಯ ಮತ್ತು ನಿಷ್ಪಕ್ಷಪಾತತೆಯನ್ನು ಅವರಿಂದ ನಿರೀಕ್ಷಿಸಲು ಆಗದು
ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ

ಮುಂದುವರಿದ ವೈದ್ಯರ ಪ್ರತಿಭಟನೆ

  • ಕೋಲ್ಕತ್ತ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧೆಡೆ ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಷ್ಟ್‌) ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

  • ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಸ್ಥಾನಿಕ ವೈದ್ಯರ ಪ್ರತಿಭಟನೆಗೆ ಶುಕ್ರವಾರ ಹಿರಿಯ ವೈದ್ಯರೂ ಕೈಜೋಡಿಸಿದರು. ಇದರಿಂದ ರಾಜ್ಯದ ಹಲವೆಡೆ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡಿದರು.

  • ಆಂಧ್ರ ಪ್ರದೇಶದ ಮಂಗಳಗಿರಿ ‘ಏಮ್ಸ್‌’ ವಿದ್ಯಾರ್ಥಿಗಳು ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

  • ಜಾರ್ಖಂಡ್‌ನ ಐದು ವೈದ್ಯಕೀಯ ಕಾಲೇಜುಗಳ ಕಿರಿಯ ವೈದ್ಯರು ಒಪಿಡಿ ಮತ್ತು ತುರ್ತು ಅಲ್ಲದ ಸೇವೆಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.

  • ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಕೋಲ್ಕತ್ತದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಟಿಎಂಸಿ ಬೆಂಬಲಿಗರು ಪ್ರತಿಭಟನಾ ರ್‍ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT