ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ: ಒಬ್ಬ ಸಂಸದ ಕುರ್ತಾ ಹರಿದುಕೊಂಡ, ಮತ್ತೊಬ್ಬ ಸಂವಿಧಾನವನ್ನೇ ಹರಿದ

ರಾಜ್ಯಸಭೆಯಲ್ಲಿ ಪ್ರಹಸನ
Last Updated 7 ಆಗಸ್ಟ್ 2019, 5:22 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸಂವಿಧಾನವೇ ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯ ಆಗಲಿದೆ. ಪರಿಣಾಮವಾಗಿ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಆ ರಾಜ್ಯಕ್ಕೆ ಇದ್ದ ವಿಶೇಷ ಸೌಲಭ್ಯಗಳು ಕೊನೆಯಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಘೋಷಿಸುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಬಹುದೊಡ್ಡ ಪ್ರಹಸನವೇ ನಡೆದು ಹೋಯಿತು. ಪಿಡಿಪಿಯ ಒಬ್ಬ ಸಂಸದ ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರೆ, ಮತ್ತೊಬ್ಬರು ತಮ್ಮ ಕುರ್ತಾವನ್ನೇ ಹರಿದು ಹಾಕಿ ಆಕ್ರೋಶ ಹೊರಹಾಕಿದರು.

ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಭಾರಿ ಹುರುಪಿನಿಂದ ಇದ್ದರು. ಕಲಾಪ ಆರಂಭಕ್ಕೆ ಅಲ್ಪ ಮೊದಲು ಶಾ ಅವರು ಸದನ ಪ್ರವೇಶಿಸಿದಾಗ ಮೇಜು ಕುಟ್ಟಿ ಅವರನ್ನು ಸ್ವಾಗತಿಸಲಾಯಿತು. ಅದಕ್ಕೆ ಒಂದು ಗಂಟೆ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕ್ರಮಗಳಿಗೆ ಸಚಿವ ಸಂಪುಟವು ಒಪ್ಪಿಗೆ ಕೊಟ್ಟಿತ್ತು. ಅದು ಬಹಿರಂಗವಾಗಿಲ್ಲದಿದ್ದರೂ ಬಿಜೆಪಿಯ ಸದಸ್ಯರಲ್ಲಿ ಹಲವರಿಗೆ ವಿಚಾರ ಏನು ಎಂಬುದರ ಅರಿವು ಇತ್ತು. ಬೆಳಿಗ್ಗೆ 11 ಗಂಟೆಗೆ ಶಾ ಅವರು ರಾಜ್ಯಸಭೆಯಲ್ಲಿ ಮತ್ತು ಒಂದು ಗಂಟೆ ಬಳಿಕ ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೂ ಮೀಸಲಾತಿ ವಿಸ್ತರಣೆಯ ತಿದ್ದುಪಡಿ ಮಸೂದೆಯನ್ನು ಶಾ ಅವರು ಮಂಡಿಸುವಾಗ ವಿರೋಧ ಪಕ್ಷಗಳ ಸದಸ್ಯರು ತಾಳ್ಮೆಯಿಂದ ಕುಳಿತಿದ್ದರು. 370ನೇ ವಿಧಿಯ ವಿಶೇಷ ಸೌಲಭ್ಯಗಳು ಕೊನೆಯಾಗಲಿವೆ ಮತ್ತು ರಾಜ್ಯವನ್ನು ವಿಭಜಿಸಲಾಗುವುದು ಎಂದು ಶಾ ಹೇಳುತ್ತಿದ್ದಂತೆಯೇ ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್‌, ಆರ್‌ಜೆಡಿ, ಕೇರಳ ಕಾಂಗ್ರೆಸ್‌ ಮತ್ತು ಡಿಎಂಕೆ ಸದಸ್ಯರು ಸಭಾಪತಿಯ ಪೀಠದ ಮುಂದೆ ಜಮಾಯಿಸಿ ಘೋಷಣೆ ಕೂಗಲಾರಂಭಿಸಿದರು.

ಪೀಠದ ಮುಂದೆಯೇ ಧರಣಿ ನಡೆಸುವಂತೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ಸೂಚಿಸಿದರು. ಅದರಂತೆಯೇ ಹಲವು ಸದಸ್ಯರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ, ಪಿಡಿಪಿ ಸಂಸದ ಮೊಹಮ್ಮದ್‌ ಫಯಾಜ್‌ ಅವರು ತಮ್ಮ ಕುರ್ತಾ ಹರಿದುಕೊಂಡರು. ತಕ್ಷಣವೇ, ಪಿಡಿಪಿಯ ಮತ್ತೊಬ್ಬ ಸಂಸದ ನಜೀರ್‌ ಅಹ್ಮದ್‌ ಲಾವೇ ಅವರು ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರು. ಸಂಸದರೆಲ್ಲರೂ ದಿಗ್ಭ್ರಮೆಯಿಂದ ನೋಡುತ್ತಿದ್ದಂತೆಯೇ ಬಿಜೆಪಿ ಸಂಸದ ವಿಜಯ ಗೋಯಲ್‌ ಅವರು ಲಾವೇ ಅವರತ್ತ ಓಡಿ ಬಂದು ಸಂವಿಧಾನವನ್ನು ಕಸಿದುಕೊಳ್ಳಲು ಯತ್ನಿಸಿದರು. ಗೋಯಲ್‌ ಅವರನ್ನುಲಾವೇ ತಳ್ಳಿದರು. ಲಾವೇ ಅವರ ರಕ್ಷಣೆಗೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಅವರೂ ಹೋದರು.

ಪಿಡಿಪಿಯ ಸಂಸದರನ್ನು ಹೊರಗೆ ಹಾಕುವಂತೆ ಮಾರ್ಷಲ್‌ಗಳಿಗೆ ಸಭಾಪತಿ ವೆಂಕಯ್ಯ ನಾಯ್ಡು ಸೂಚಿಸಿದರು. ಸಂವಿಧಾನವನ್ನು ಹರಿಯಲು ಯಾರಿಗೂ ಅವಕಾಶ ಕೊಡುವುದಿಲ್ಲ, ಈ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT