ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಲ್ಲಿ ಶಾಂತಿ ನೆಲೆಸಿದೆ, ಪ್ರಧಾನಿ ಮೋದಿ ಕಂಡರೆ ಪಾಕಿಸ್ತಾನಕ್ಕೆ ಭಯ: ಅಮಿತ್ ಶಾ

Published : 21 ಸೆಪ್ಟೆಂಬರ್ 2024, 11:02 IST
Last Updated : 21 ಸೆಪ್ಟೆಂಬರ್ 2024, 11:02 IST
ಫಾಲೋ ಮಾಡಿ
Comments

ಮೆಂಧಾರ್‌: ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಶಾಂತಿ ನೆಲೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೆ ಪಾಕಿಸ್ತಾನಕ್ಕೆ ಭಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಪೂಂಚ್‌ ಜಿಲ್ಲೆಯ ಗಡಿ ಪ್ರದೇಶದಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ ಶಾ, ಬಿಜೆಪಿ ಅಭ್ಯರ್ಥಿ ಮುರ್ತಜಾ ಖಾನ್‌ ಪರ ಶನಿವಾರ ಪ್ರಚಾರ ಮಾಡಿದರು.

ಗನ್‌ ಮತ್ತು ಕಲ್ಲುಗಳನ್ನು ಹಿಡಿಯುತ್ತಿದ್ದ ಯುವಕರ ಕೈಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್‌ಗಳನ್ನು ನೀಡಿದೆ. ಆ ಮೂಲಕ ಭಯೋತ್ಪಾದನೆಯನ್ನು ತೊಡೆದುಹಾಕಿದೆ ಎಂದಿರುವ ಗೃಹ ಸಚಿವ, ತಮ್ಮ ಸರ್ಕಾರವು ಕಣಿವೆ ನಾಡಲ್ಲಿ ಗನ್‌ ಸದ್ದು ಮೊಳಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

'ಜನರ ಸುರಕ್ಷತೆಗಾಗಿ ನಾವು ಮತ್ತಷ್ಟು ಬಂಕರ್‌ಗಳನ್ನು ಗಡಿಯುದ್ದಕ್ಕೂ ನಿರ್ಮಿಸುತ್ತೇವೆ. 1990ರ ದಶಕದಲ್ಲಿ ಗಡಿಯಲ್ಲಿ (ಭಾರತ, ಪಾಕಿಸ್ತಾನ ಯೋಧರ ನಡುವೆ) ನಡೆಯುತ್ತಿದ್ದ ಗುಂಡಿನ ಚಕಮಕಿಯನ್ನು ನೆನಪಿಸಲು ಬಯಸುತ್ತೇನೆ. ಇಂದು ಅಂತಹ ಚಕಮಕಿ ನಡೆಯುತ್ತಿದೆಯೇ?. ಹಿಂದಿನ ಸರ್ಕಾರಗಳು ಪಾಕಿಸ್ತಾನಕ್ಕೆ ಬೆದರುತ್ತಿದ್ದುದರಿಂದ ಗುಂಡಿನ ಚಕಮಕಿ ನಡೆಯುತ್ತಿದ್ದವು. ಆದರೆ ಈಗ, ಪಾಕಿಸ್ತಾನವೇ ಮೋದಿಗೆ ಹೆದರುತ್ತಿದೆ. ಅವರಿಗೆ ಗುಂಡು ಹಾರಿಸುವ ಧೈರ್ಯವಿಲ್ಲ. ಆದಾಗ್ಯೂ, ಅವರೇನಾದರೂ ಗುಂಡು ಹಾರಿಸಿದರೆ, ಅದಕ್ಕೆ ತಕ್ಕ ಪ್ರತಿಫಲ ಅನುಭವಿಸುತ್ತಾರೆ' ಎಂದು ಶಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಶಾ, ಪೂಂಚ್‌, ರಾಜೌರಿ ಮತ್ತು ಜಮ್ಮು ಜಿಲ್ಲೆಯಲ್ಲಿ ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ವಿಧಿ ಅಡಿಯಲ್ಲಿ ಕಲ್ಪಿಸಲಾಗಿದ್ದ 'ವಿಶೇಷ ಸ್ಥಾನಮಾನ'ವನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

2019ರ ಆಗಸ್ಟ್ 5ರಂದು 'ವಿಶೇಷ ಸ್ಥಾನಮಾನ' ಹಿಂಪಡೆದಿದ್ದ ಕೇಂದ್ರ, ಅದೇ ದಿನ, ರಾಜ್ಯವನ್ನು ವಿಭಜಿಸಿತ್ತು. ಲಡಾಖ್, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಿತ್ತು.

ಚುನಾವಣೆ
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಸೆಪ್ಟೆಂಬರ್‌ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಮತದಾನವಾಗಿದೆ. ಸೆಪ್ಟೆಂಬರ್‌ 25ರಂದು ಎರಡನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತ್ತು ಅಕ್ಟೋಬರ್‌ 1ರಂದು ಮೂರನೇ ಹಂತದದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT