ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರ: ಬದಲಾಗಲಿದೆಯೇ ರಾಜಕೀಯ ಲೆಕ್ಕಾಚಾರ?

ಸಂಸದ ರಶೀದ್‌ಗೆ ಮಧ್ಯಂತರ ಜಾಮೀನು
Published : 10 ಸೆಪ್ಟೆಂಬರ್ 2024, 16:32 IST
Last Updated : 10 ಸೆಪ್ಟೆಂಬರ್ 2024, 16:32 IST
ಫಾಲೋ ಮಾಡಿ
Comments

ಶ್ರೀನಗರ: ಲೋಕಸಭಾ ಸದಸ್ಯ ಎಂಜಿನಿಯರ್‌ ರಶೀದ್‌ ಅವರಿಗೆ ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿರುವುದು, ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳನ್ನು ಬದಲಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ರಶೀದ್‌ 2019ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ. ದೆಹಲಿಯ ನ್ಯಾಯಾಲಯ ಅಕ್ಟೋಬರ್‌ 2ರ ವರೆಗೆ ಮಧ್ಯಂತರ ಜಾಮೀನು ನೀಡಿದ್ದರಿಂದ ಅವರು ಮಂಗಳವಾರ ಜೈಲಿನಿಂದ ಹೊರಬಂದರು. 

ಅವಾಮಿ ಇತ್ತೆಹಾದ್‌ ಪಾರ್ಟಿಯ (ಎಐಪಿ) ಪ್ರಭಾವಿ ನಾಯಕರಾಗಿರುವ ರಶೀದ್‌ ಅವರು ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ, ಮಾಜಿ ಮುಖ್ಯಮಂತ್ರಿಯೂ ಆಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕ ಒಮರ್‌ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಾಧಿಸಿದ ಗೆಲುವು, ಅವರ ಪ್ರಭಾವ ಏನೆಂಬುದನ್ನು ತೋರಿಸಿಕೊಟ್ಟಿತ್ತು.

ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳಿರುವಾಗ ರಶೀದ್‌ ಅವರು ಜೈಲಿನಿಂದ ಹೊರಬಂದಿರುವುದು ರಾಜಕೀಯ ಸಮೀಕರಣದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕ ಜಾವಿದ್‌ ತ್ರಾಲಿ ಹೇಳಿದ್ದಾರೆ.

‘ಪ್ರಚಾರ ಕಣದಲ್ಲಿ ಅವರ ಉಪಸ್ಥಿತಿಯು ಬೆಂಬಲಿಗರಿಗೆ ಹೆಚ್ಚಿನ ಶಕ್ತಿ ತುಂಬಲಿದೆಯಲ್ಲದೆ, ಮತದಾರರ ಕ್ರೋಡೀಕರಣಕ್ಕೆ ಕಾರಣವಾಗಬಹುದು. ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿಯಂತಹ ಪ್ರಮುಖ ಪಕ್ಷಗಳ ಪ್ರಾಬಲ್ಯಕ್ಕೆ ಅಡ್ಡಿಯಾಗಲೂಬಹುದು’ ಎಂದಿದ್ದಾರೆ.

ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ದ ನಿರಂತರ ಧ್ವನಿಯೆತ್ತಿದ್ದ ರಶೀದ್‌ ಅವರು ಕೆಲ ವರ್ಷಗಳಿಂದ ಜೈಲಿನಲ್ಲಿದ್ದರೂ, ಜನ ಬೆಂಬಲವನ್ನು ಉಳಿಸಿಕೊಂಡಿದ್ದಾರೆ. ‘ಜೈಲು ಮುಕ್ತ ಜಮ್ಮು ಮತ್ತು ಕಾಶ್ಮೀರ’ ಹಾಗೂ ಯುಎಪಿಎ ರದ್ದತಿಯ ಭರವಸೆಯನ್ನು ಎಐಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವುದರಿಂದ ಯುವ ಮತದಾರರು ಪಕ್ಷವನ್ನು ಬೆಂಬಲಿಸುವ ಸಾಧ್ಯತೆಯಿದೆ.

ಎಐಪಿ ನಾಯಕ ಮತ್ತು ಮಾಜಿ ಶಾಸಕ ಶೋಯೆಬ್ ಲೋನ್‌ ಅವರು ರಶೀದ್ ಅವರ ಮಧ್ಯಂತರ ಜಾಮೀನು ಮುಂಬರುವ ಚುನಾವಣೆಯಲ್ಲಿ ‘ಗೇಮ್‌– ಚೇಂಜರ್‌’ ಆಗಲಿದೆ ಎಂದು ಬಣ್ಣಿಸಿದ್ದಾರೆ. ‘ಹುಲಿ ಮರಳಿ ಬಂದಿದೆ. ಅವರಿಗೆ ಅದ್ದೂರಿ ಸ್ವಾಗತ ನೀಡಲಾಗುವುದು. ಒಮ್ಮೆ ಅವರು ಪ್ರಚಾರ ಕಣಕ್ಕಿಳಿದರೆ, ಇಡೀ ಚುನಾವಣಾ ವಾತಾವರಣ ಬದಲಾಗುವುದನ್ನು ನೀವು ನೋಡುವಿರಿ’ ಎಂದಿದ್ದಾರೆ.

ರಶೀದ್‌ ಅವರು ಎಂಜಿನಿಯರ್‌ ಹುದ್ದೆ ತೊರೆದು 2008ರಲ್ಲಿ ರಾಜಕೀಯ ಸೇರಿದ್ದರು. ಲಂಗೇಟ್‌ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಅವರು 2014ರಲ್ಲಿ ಅದೇ ಕ್ಷೇತ್ರದಿಂದ ಎಐಪಿ ಅಭ್ಯರ್ಥಿಯಾಗಿ ಜಯಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT