ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು – ಕಾಶ್ಮೀರದ ನೆಲ ಹೊರಗಿನವರಿಗೆ ಮಾರಾಟಕ್ಕೆ ಮುಕ್ತ

ರಿಯಲ್‌ ಎಸ್ಟೇಟ್‌ ಕಂಪನಿಗಳ ಜೊತೆ 39 ಒಪ್ಪಂದಗಳಿಗೆ ಸಹಿ
Last Updated 28 ಡಿಸೆಂಬರ್ 2021, 10:58 IST
ಅಕ್ಷರ ಗಾತ್ರ

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ರಿಯಲ್‌ ಎಸ್ಟೇಟ್‌ ಹೂಡಿಕೆದಾರರ ಜತೆ ₹ 18,300 ಕೋಟಿ ಬೃಹತ್‌ ಮೊತ್ತದ ವಸತಿ ಹಾಗೂ ವಾಣಿಜ್ಯ ಉದ್ದೇಶದ ಯೋಜನೆಗಳನ್ನು ಕಾರ್ಯಗತಗೊಳಿಸಲು 39 ಒಪ್ಪಂದಗಳಿಗೆ ಸಹಿ ಹಾಕಿದೆ.

ಸಿಗ್ನೇಚರ್‌ ಗ್ಲೋಬಲ್‌, ಸಮ್ಯಕ್‌ ಗ್ರೂಪ್‌, ರೌನಕ್‌ ಗ್ರೂಪ್‌, ಹೀರಾನಂದಾನಿ ಕನ್‌ಸ್ಟ್ರಕ್ಷನ್‌ ಫಾರ್ ಹೌಸಿಂಗ್‌ ಡೆವಲಪ್‌ಮೆಂಟ್‌, ಚಾಲೆಟ್ ಹೋಟೆಲ್ಸ್‌ ಲಿಮಿಟೆಡ್, ರಹೇಜಾ ಡೆವಲಪರ್ಸ್, ಗೋಯೆಲ್ ಗಂಗಾ, ಜಿಎಚ್‌ಪಿ ಗ್ರೂಪ್ ಮತ್ತು ಶ್ರೀನಮನ್ ಗ್ರೂಪ್ ಕಂಪನಿಗಳು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ, ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರ ಸಮ್ಮುಖದಲ್ಲಿ ಸಹಿ ಹಾಕಿವೆ.

‘ಇತ್ತೀಚೆಗೆ ಜಮ್ಮುವಿನಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ರಿಯಲ್‌ ಎಸ್ಟೇಟ್‌ ಸಮಾವೇಶದಲ್ಲಿ ಆದ ಒಪ್ಪಂದದ ಐತಿಹಾಸಿಕ ಕ್ಷಣ ಇದಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿನ ಈ ಬದಲಾವಣೆಯು ಮಹತ್ತರವಾದ ಹೆಜ್ಜೆಯಾಗಿದೆ’ ಎಂದು ಲೆಫ್ಟೆನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ ಬಣ್ಣಿಸಿದ್ದಾರೆ.

‘ಮೊಟ್ಟ ಮೊದಲ ಬಾರಿಗೆ ನಡೆದ ‘ರಿಯಲ್‌ ಎಸ್ಟೇಟ್‌ ಶೃಂಗಸಭೆ–2021’ರ ಸಮಾವೇಶದಲ್ಲಿ ವಸತಿ, ವಾಣಿಜ್ಯ, ಮೂಲಸೌಕರ್ಯ, ರಿಟೇಲ್‌, ಆಸ್ಪತ್ರೆ, ಮನೋರಂಜನೆ, ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ, ಸರಕು ಸಾಗಣೆ, ಉಗ್ರಾಣ, ಹಣಕಾಸು ವ್ಯವಹಾರ ಸೇರಿದಂತೆ ದೇಶದ ರಿಯಲ್‌ ಎಸ್ಟೇಟ್‌ ವಲಯದ ದಿಗ್ಗಜರೆಲ್ಲರೂ ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ಒಂದುಗೂಡಿದ್ದಾರೆ’ ಎಂದು ವಕ್ತಾರರು ತಿಳಿಸಿದರು.

‘ದೇಶದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರವು ಉದ್ಯೋಗ ಸೃಷ್ಟಿಸುವ ಎರಡನೇ ಅತಿದೊಡ್ಡ ವಲಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಪ್ರಗತಿಗೆ ಅಸಂಖ್ಯ ಅವಕಾಶಗಳು ತೆರೆದುಕೊಂಡಿವೆ. ಇಲ್ಲಿನ ಜನ ಅದ್ವಿತೀಯ ಸಾಮರ್ಥ್ಯ ಹೊಂದಿದ್ದಾರೆ. ಇದನ್ನು ಈ ಪ್ರದೇಶದ ಆರ್ಥಿಕ ಪ್ರಗತಿಗೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದರು.

‘ಮುಂದಿನ ರಿಯಲ್‌ ಎಸ್ಟೇಟ್‌ ಶೃಂಗಸಭೆಯು 2022ರ ಮೇ 21, 22ರಂದು ಶ್ರೀನಗರದಲ್ಲಿ ನಡೆಯಲಿದೆ. ಜಮ್ಮು ಕಾಶ್ಮೀರವು ಆರ್ಥಿಕ ಪ್ರಗತಿ ಸಾಧಿಸಲು ಸ್ಥಳೀಯ ಉದ್ಯಮ ಬೆಳೆಸುವುದು ಮುಖ್ಯವಾಗಿದೆ. ರಾಷ್ಟ್ರಮಟ್ಟದ ಕಂಪನಿಗಳ ಜತೆಗೆ ಸ್ಥಳೀಯ ರಿಯಲ್‌ ಎಸ್ಟೇಟ್‌ ಹೂಡಿಕೆದಾರರ ಕಡೆಗೂ ಗಮನವನ್ನು ಕೇಂದ್ರಿಕರಿಸುತ್ತಿದ್ದೇವೆ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹೇಳಿದರು.

ಜಮ್ಮು–ಕಾಶ್ಮೀರ ಮಾರಾಟ ಯತ್ನ; ಟೀಕೆ

ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸ್ಥಾನಮಾನ ಹೋರಾಟ ಸಮಿತಿ ಅಧ್ಯಕ್ಷ ಸುನೀಲ್‌ ಡಿಂಪಲ್‌, ‘ಸರ್ಕಾರ ಜಮ್ಮು ಕಾಶ್ಮೀರವನ್ನು ಮಾರಾಟ ಮಾಡಲು ಹೊರಟಿದೆ. ನಮ್ಮ ಜೀವನ, ಇತಿಹಾಸ, ಅಸ್ಮಿತೆ ಬದಲಾಯಿಸಲು ಹೊರಟಿದೆ. ಜಮ್ಮು ಮತ್ತು ಕಾಶ್ಮೀರಿಗಳ ಪ್ರವೃತ್ತಿ ಹಾಗೂ ಗುಣವನ್ನು ಬದಲಾಯಿಸುವ ಯಾವುದೇ ಅಭಿವೃದ್ಧಿಯನ್ನು ನಾವು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

‘ಈ ಒಪ್ಪಂದವು ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಮಾಡಿದ ಮತ್ತೊಂದು ನಿಕೃಷ್ಟ ಕೆಲಸ. ಇದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಲಜ್ಜೆಗೆಟ್ಟ ಪ್ರಯತ್ನ. ದೇಶದ ಆರ್ಥಿಕ ಸಂಕಷ್ಟ, ರೈತರ ಸಮಸ್ಯೆ, ಹೆಚ್ಚಿದ ನಿರೋದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ವೈಫಲ್ಯಗಳಿಗೆ ಜಮ್ಮು ಮತ್ತು ಕಾಶ್ಮೀರವನ್ನು ಹರಕೆಯ ಕುರಿ ಮಾಡಲಾಗುತ್ತಿದೆ’ ಎಂದು ಜೆಕೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ವಕ್ತಾರ ಇಮ್ರಾನ್‌ ದಾರ್‌ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಹೊರತುಪಡಿಸಿ ಹೊರಗಿನವರು ಇಲ್ಲಿ ಭೂಮಿಯನ್ನು ಖರೀದಿಸುವ ಹಕ್ಕಿರಲಿಲ್ಲ. ಆದರೆ ಕಣಿವೆ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನ 370ನೇ ವಿಧಿ ರದ್ದುಗೊಂಡ ನಂತರ ಈ ನಿಯಮವನ್ನು ತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT