ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾರತರತ್ನ' ಕರ್ಪೂರಿ ಠಾಕೂರ್; ಬಿಹಾರದ ಹೃದಯಸ್ಪರ್ಶಿ ಜನಸೇವಕ

Published 23 ಜನವರಿ 2024, 21:55 IST
Last Updated 23 ಜನವರಿ 2024, 21:55 IST
ಅಕ್ಷರ ಗಾತ್ರ

ಬೆಂಗಳೂರು: ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮುಂಚೂಣಿ ನಾಯಕರಲ್ಲಿ ಕರ್ಪೂರಿ ಠಾಕೂರ್ ಅವರೂ ಒಬ್ಬರು. ಅವರಿಗೀಗ ಮರಣೋತ್ತರ ಭಾರತರತ್ನ ಪುರಸ್ಕಾರದ ಗೌರವ.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದೇ ಅಲ್ಲದೆ ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ ಅವರು ಎರಡು ಅವಧಿಯಲ್ಲಿ ಬಿಹಾರದ ಮುಖ್ಯಮಂತ್ರಿ ಆಗಿದ್ದವರು.

ಲಾಲು ಪ್ರಸಾದ್, ನಿತೀಶ್ ಕುಮಾರ್, ರಾಮ್ ವಿಲಾಸ್‌ ಪಾಸ್ವಾನ್ ಹಾಗೂ ಸುನಿಲ್ ಕುಮಾರ್ ಮೋದಿ ರಾಜಕೀಯದಲ್ಲಿ ಅವರ ಶಿಷ್ಯರು.

ಕರ್ಪೂರಿ ಠಾಕೂರ್ ಹುಟ್ಟಿದ್ದು 1924ರ ಜನವರಿ 24ರಂದು. ತಂದೆ ಶ್ರೀ ಕೋಗುಲ್‌ ಠಾಕೂರ್, ತಾಯಿ ರಾಮ್‌ದುಲಾರಿ ದೇವಿ. ಅವರ ತಂದೆ ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಕೃಷಿಕರೂ ಆಗಿದ್ದರು.

ಪಟ್ನಾ ವಿಶ್ವವಿದ್ಯಾಲಯದಿಂದ 1940ರಲ್ಲಿ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆಯಾದ ಅವರು, ಆಮೇಲೆ ದರ್ಭಾಂಗದಲ್ಲಿನ ಚಂದ್ರಧರಿ ಮಿಥಿಲಾ ಕಾಲೇಜಿನಲ್ಲಿ ‘ಇಂಟರ್‌ಮೀಡಿಯೇಟ್‌ ಆರ್ಟ್ಸ್‌’ ಕಲಿತರು. ಬಿ.ಎ. ಪದವಿಯನ್ನು ಕೂಡ ಪಡೆದರು. ಮುಂದೆ ತಮ್ಮದೇ ಹಳ್ಳಿಯ ಶಾಲೆಯಲ್ಲಿ ಮೇಷ್ಟರಾದರು. ಕ್ವಿಟ್‌ ಇಂಡಿಯಾ ಚಳವಳಿ ಪ್ರಾರಂಭವಾದಾಗ ಓದನ್ನು ಬದಿಗೊತ್ತಿ, ಅದರಲ್ಲಿ ಕರ್ಪೂರಿ ಪಾಲ್ಗೊಂಡರು. ಜಯಪ್ರಕಾಶ್ ನಾರಾಯಣ್ ರಚಿಸಿದ್ದ ‘ಆಜಾದ್ ದಾಸ್ತಾ’ದ ಸಕ್ರಿಯ ಸದಸ್ಯರಾದರು.

ಪಟ್ನಾದ ಕೃಷ್ಣಾ ಟಾಕೀಸಿನ ಬಳಿ ಅವರು ಮೊದಲು ನೀಡಿದ ಭಾಷಣ ಮಹತ್ವದ್ದಾಗಿತ್ತು. ‘ನಮ್ಮ ದೇಶದ ಜನಸಂಖ್ಯೆ ಎಷ್ಟಿದೆ ಎಂದರೆ, ಎಲ್ಲರೂ ಸೇರಿ ಜೋರಾಗಿ ಉಗಿದರೆ ಬ್ರಿಟಿಷರು ಓಡಿಹೋಗುತ್ತಾರೆ’ ಎಂದಿದ್ದರು. ಆ ಭಾಷಣದ ನಂತರ ಬ್ರಿಟಿಷ್ ಸರ್ಕಾರ ಅವರನ್ನು ಶಿಕ್ಷೆಗೆ ಒಳಪಡಿಸಿತ್ತು. ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ 26 ತಿಂಗಳು ಅವರು ಜೈಲುವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಬರುವ ಮೊದಲು ಎರಡು ಸಲ ಹಾಗೂ ಬಂದ ನಂತರ 18 ಸಲ ಅವರು ಜೈಲು ಶಿಕ್ಷೆ ಕಂಡಿದ್ದರು. 

ಲೋಹಿಯಾ ಅವರ ನಿಲುವಿಗೆ ವಿರುದ್ಧವಾಗಿ, 1967ರಲ್ಲಿ ಜನ ಸಂಘ–ಕಮ್ಯುನಿಸ್ಟ್‌ನ ಮಹಾಮಾಯಾ ಪ್ರಸಾದ್ ಸಿನ್ಹಾ ಮುಖ್ಯಮಂತ್ರಿಯಾಗಲು ಕರ್ಪೂರಿ ಅವರ ಜಾಣತನವೇ ಕಾರಣ.

ಶಿಕ್ಷಣದಲ್ಲಿ ಸುಧಾರಣೆ: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1952ರಲ್ಲಿ ಬಿಹಾರದ ತೈಪುರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಬಾರಿಗೆ ಕರ್ಪೂರಿ ಗೆಲುವು ಸಾಧಿಸಿದರು. ಸಮಾಜವಾದಿಯಾಗಿದ್ದ ಅವರು ಹಲವು ಸಮಸ್ಯೆಗಳ ಕುರಿತು ಸೊಲ್ಲೆತ್ತಿದರು. 1967ರಲ್ಲಿ ಮಹಾಮಾಯಾ ಪ್ರಸಾದ್ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಮೆಟ್ರಿಕ್ಯುಲೇಷನ್ ತೇರ್ಗಡೆಯಾಗಲು ಇದ್ದ ಇಂಗ್ಲಿಷ್‌ನ ಅಗತ್ಯವನ್ನು ತಪ್ಪಿಸಿದರು. 1970ರಲ್ಲಿ ಕರ್ಪೂರಿ ಠಾಕೂರ್ ಅವರ ಸರ್ಕಾರ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿತು. ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣ, ಉರ್ದು ಭಾಷೆಗೆ ರಾಜ್ಯದಲ್ಲಿ ಎರಡನೆ ಸ್ಥಾನಮಾನ ನೀಡಿ ಸದ್ದು ಮಾಡಿದರು. ಬಡತನ, ನಿರುದ್ಯೋಗ, ಭ್ರಷ್ಟಾಚಾರದ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಂಡರು. ಅವರ ಕೆಲಸಗಳಿಂದ ‘ಜನಸೇವಕ್’ ಎಂದೇ ಹೆಸರಾದರು. 

ದಮನಿತರಿಗೆ ಮೀಸಲಾತಿ: 1978ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಉದ್ಯೋಗದಲ್ಲಿ ದಮನಿತರಿಗೆ ಶೇ 26ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಅದಕ್ಕೆ ಅನೇಕ ಟೀಕೆಗಳನ್ನೂ ಎದುರಿಸಿದರು.

ರಾಜ್ಯದ ಸರ್ಕಾರಿ ನೌಕರರಿಗೆಲ್ಲ ಸಮಾನ ವೇತನ ಪದ್ಧತಿಯನ್ನು ವೇತನ ಆಯೋಗದ ಮೂಲಕ ಜಾರಿಗೆ ತಂದರು. ಏಕಕಾಲದಲ್ಲಿ 9000 ಎಂಜಿನಿಯರ್‌ಗಳು ಹಾಗೂ ವೈದ್ಯರಿಗೆ ಶಿಬಿರವೊಂದರಲ್ಲಿ ಉದ್ಯೋಗ ದೊರಕುವಂತೆ ಮಾಡಿದರು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು. 1988ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು.

ರಾಜಕಾರಣಿಗಳ ಭ್ರಷ್ಟಾಚಾರದ ಪ್ರಸಂಗಗಳನ್ನೇ ಪುಂಖಾನುಪುಂಖವಾಗಿ ನೋಡುವ ನಮಗೆ ಅವರು ತಮಗಾಗಿ ಒಂದು ಮನೆಯನ್ನೂ ಕಟ್ಟಿಕೊಳ್ಳಲಿಲ್ಲ ಎ‌ನ್ನುವುದು ಅಚ್ಚರಿಯಾಗಿ ಕಾಣಬಹುದು. ಅವರು ಹಳ್ಳಿಯಲ್ಲಿ ಸರಳ ವಿವಾಹವಾದಾಗ, ತಮ್ಮ ಸಚಿವ ಸಂಪುಟದವರನ್ನೂ ಆಹ್ವಾನಿಸಿರಲಿಲ್ಲ.

ಜಾತಿಯ ಕಹಿ
ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆಯಾದ ಮೇಲೆ ಕರ್ಪೂರಿ ಅವರ ತಂದೆ ಶ್ರೀಮಂತರೊಬ್ಬರ ಮನೆಗೆ ಕರೆದುಕೊಂಡು ಹೋದರು. ಆಗ ಆ ಶ್ರೀಮಂತರು ತಮ್ಮ ಕಾಲನ್ನು ಮೇಜಿನ ಮೇಲೆ ಇಟ್ಟು, ‘ನೀನು ಮೊದಲ ದರ್ಜೆಯಲ್ಲಿ ತೇರ್ಗಡೆಯಾದೆಯಾ? ಹಾಗಿದ್ದರೆ ನನ್ನ ಕಾಲನ್ನು ಮುಟ್ಟು’ ಎಂದಿದ್ದರು.

ಮಗನಿಗೆ ಎಚ್ಚರಿಕೆ ಪತ್ರ

ಮೊದಲ ಬಾರಿಗೆ ಬಿಹಾರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆದಾಗ ಕರ್ಪೂರಿ ತಮ್ಮ ಮಗ ರಾಮನಾಥ್ ಠಾಕೂರ್‌ ಅವರಿಗೆ ಪತ್ರವೊಂದನ್ನು ಬರೆದರು. ‘ರಾಜಕೀಯದಲ್ಲಿ ಯಾವ ಕಾರಣಕ್ಕೂ ದುರಾಸೆಪಡಬಾರದು’ ಎಂದು ಎಚ್ಚರಿಸಿದ್ದರು. ತಾವು ರಾಜಕೀಯ ಪ್ರವೇಶಿಸಲು ತಮ್ಮ ತಂದೆ ಸ್ಫೂರ್ತಿ ನೀಡಿದವರೇ ಅಲ್ಲ ಎಂದು ರಾಮನಾಥ್ ಠಾಕೂರ್ ಕೂಡ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT