ಕೊಟ್ಟಾಯಂ (ಕೇರಳ): ಕೇರಳದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಸೇರಿದಂತೆ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದರು.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಪಿ. ಶಶಿ ಮತ್ತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಡಳಿತಾರೂಢ ಎಲ್‌ಡಿಎಫ್ ಶಾಸಕ ಪಿ.ವಿ. ಅನ್ವರ್ ಅವರು ಭಾನುವಾರ ಗಂಭೀರ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.
‘ಹಿರಿಯ ಅಧಿಕಾರಿಗಳ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು’ ಎಂದು ಸಿ.ಎಂ ಪಿಣರಾಯಿ ವಿಜಯನ್ ಅವರು ಸೋಮವಾರ ಪೊಲೀಸ್ ಇಲಾಖೆಯ ಕಾರ್ಯಕ್ರಮದಲ್ಲಿ ಘೋಷಿಸಿದರು. ಈ ವೇಳೆ ಎಡಿಜಿಪಿ ಅಜಿತ್ ಕುಮಾರ್ ಅವರು ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.
‘ಪೊಲೀಸ್ ಇಲಾಖೆಯಲ್ಲಿನ ಅಶಿಸ್ತನ್ನು ಸಹಿಸಲಾಗದು. ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಗಂಭಿರವಾಗಿ ಪರಿಗಣಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ಕೆಲ ಅಧಿಕಾರಿಗಳಿಂದ ಇಡೀ ಪೊಲೀಸ್ ಇಲಾಖೆಗೆ ಅಪಕೀರ್ತಿ ಬರುತ್ತಿದೆ. ಎಂಟು ವರ್ಷಗಳಲ್ಲಿ ಈ ರೀತಿಯ ವರ್ತನೆ ತೋರಿದ 108 ಅಧಿಕಾರಿಗಳನ್ನು ಸರ್ಕಾರ ತೆಗೆದುಹಾಕಲಾಗಿದೆ. ಈ ರೀತಿ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ಸರ್ಕಾರ ಮುಂದುವರಿಸಲಿದೆ’ ಎಂದರು.
ಉನ್ನತ ಮಟ್ಟದ ತನಿಖೆ ಕುರಿತು ಮುಖ್ಯಮಂತ್ರಿ ಘೋಷಿಸಿದ ಬೆನ್ನಲ್ಲೇ ಮಲಪ್ಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಅನ್ವರ್, ಎಡಿಜಿಪಿ ಅಜಿತ್ ಕುಮಾರ್ ವಿರುದ್ಧ ಇನ್ನಷ್ಟು ಆರೋಪಗಳನ್ನು ಮಾಡಿದರು.
‘ಈ ಹಿರಿಯ ಅಧಿಕಾರಿಯು ರಾಜಧಾನಿಯಲ್ಲಿನ ಕವಡಿಯಾರ್ ಅರಮನೆ ಬಳಿ ಐಷಾರಾಮಿ ಬಂಗಲೆ ನಿರ್ಮಿಸುತ್ತಿದ್ದಾರೆ. ಪ್ರತಿಷ್ಠಿತ ಪ್ರದೇಶದಲ್ಲಿ ನಿವೇಶನ ಖರೀದಿಸಿ ಮತ್ತು ಐಷಾರಾಮಿ ಬಂಗಲೆ ನಿರ್ಮಿಸುತ್ತಿರುವ ಈ ಅಧಿಕಾರಿಯ ಹಣದ ಮೂಲ ಯಾವುದು’ ಎಂದು ಅವರ ಪ್ರಶ್ನಿಸಿದರು.
’ಅಜಿತ್ ಕುಮಾರ್ ಅವರು ಅಕ್ರಮ ಚಿನ್ನ ಸಾಗಾಣಿಕೆ ಸೇರಿದಂತೆ ಹಲವು ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ‘ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.