ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯಗೆ ಕೇರಳ ಸಿಎಂ ಪತ್ರ: ಲಾರಿ ಚಾಲಕ ಅರ್ಜುನ್ ಪತ್ತೆಗೆ ಒತ್ತಡ

Published 4 ಆಗಸ್ಟ್ 2024, 13:20 IST
Last Updated 4 ಆಗಸ್ಟ್ 2024, 13:20 IST
ಅಕ್ಷರ ಗಾತ್ರ

ಕೋಯಿಕ್ಕೋಡ್ (ಕೇರಳ): ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಸಿಲುಕಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

‘ಅರ್ಜುನ್ ಬಹಳ ದಿನಗಳಿಂದ ನಾಪತ್ತೆಯಾಗಿರುವುದರಿಂದ ಅವರ ಕುಟುಂಬಸ್ಥರ ಆತಂಕ ಮತ್ತು ದುಃಖವನ್ನು ಹಂಚಿಕೊಳ್ಳಲು ನಾನು ಪತ್ರ ಬರೆಯುತ್ತಿದ್ದೇನೆ. ಅರ್ಜುನ್ ಪತ್ತೆಗಾಗಿ ಇಂದು ಮತ್ತೆ ಶೋಧ ಕಾರ್ಯಾಚರಣೆ ನಡೆಸುವ ಬಗ್ಗೆ ಮಾಹಿತಿ ಇತ್ತು. ಆದರೆ, ಶೋಧ ಕಾರ್ಯಾಚರಣೆ ಇನ್ನೂ ಪುನರಾರಂಭಗೊಂಡಿಲ್ಲ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ’ ಎಂದು ಅವರು ವಿವರಿಸಿದ್ದಾರೆ.

ವಿಜಯನ್ ಅವರು ಅರ್ಜುನ್ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು. ಅರ್ಜುನ್ ಪತ್ತೆ ಹಚ್ಚುವ ಬಗ್ಗೆ ಕರ್ನಾಟಕ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದರು.

ಜುಲೈ 16ರಂದು ಬೆಳಿಗ್ಗೆ 8.45ಕ್ಕೆ ಶಿರೂರಿನಲ್ಲಿ ಗುಡ್ಡ ಕುಸಿತ ಅವಘಡ ಸಂಭವಿಸಿತ್ತು. ಘಟನೆ ನಡೆದ 10 ದಿನದ ಬಳಿಕ ಲಾರಿಯ ಕ್ಯಾಬಿನ್ ನದಿ ದಡದಿಂದ 60 ಮೀಟರ್ ದೂರ ಮತ್ತು 5 ಮೀಟರ್ ಆಳದಲ್ಲಿ ಸಿಲುಕಿರುವುದು ಡ್ರೋನ್‌ ತಂತ್ರಜ್ಞಾನ ಆಧಾರಿತ ಶೋಧನ ಯಂತ್ರದಿಂದ ಗೊತ್ತಾಯಿತು. ಆದರೆ, ಚಾಲಕ ಅರ್ಜುನ್ ಸುಳಿವು ಸಿಗಲಿಲ್ಲ. ಅವರನ್ನು ಶೀಘ್ರವೇ ಪತ್ತೆ ಮಾಡುವಂತೆ ಕೇರಳ ಸರ್ಕಾರದ ಸಚಿವರು, ಶಾಸಕರು ಪಟ್ಟು ಹಿಡಿದಿದ್ದಾರೆ.

ಕೇರಳದ ಮಂಜೇಶ್ವರ ಶಾಸಕ ಎ.ಕೆ.ಅಶ್ರಫ್, ಬಾಲಾಸ್ಸೇರಿ ಶಾಸಕ ಸಚಿನ್ ದೇವ, ತಿರುವಾಂಬುಡು ಶಾಸಕ ಲಿಂಡೋ ಜೊಸೆಫ್ ಒಂದು ವಾರದಿಂದ ಶಿರೂರಿನಲ್ಲಿ ಬೀಡುಬಿಟ್ಟಿದ್ದಾರೆ. ಕೋಯಿಕ್ಕೋಡ್‌ ಸಂಸದ ಎಂ.ಕೆ.ರಾಘವನ್ ಭೇಟಿ ನೀಡಿದರು. ಕೇರಳದ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ.ಮೊಹಮ್ಮದ್ ರಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೇಗಗೊಳಿಸಲು ಒತ್ತಾಯಿಸಿದ್ದಾರೆ.

‘ಲಾರಿ ಮೇಲಕ್ಕೆತ್ತಲು ನೌಕದಳದ ಮುಳುಗುತಜ್ಞರು ಪ್ರಯತ್ನ ನಡೆಸಿದ್ದಾರೆ. ಆದರೆ, ನದಿಯ ರಭಸ ಪ್ರತಿ ಗಂಟೆಗೆ 6 ರಿಂದ 8 ನಾಟಿಕಲ್ ಮೈಲು ವೇಗವಿದೆ. ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

‘ಅರ್ಜುನ್ ಇದ್ದ ಲಾರಿ ನದಿಯಲ್ಲಿ ಸಿಲುಕಿರುವ ಸ್ಥಳ ಶೋಧಿಸಿದ್ದು, ಅದನ್ನು ಮೇಲಕ್ಕೆತ್ತಲು ತ್ವರಿತ ಕೆಲಸವಾಗಬೇಕು’ ಎಂದು ಮಂಜೇಶ್ವರ ಶಾಸಕ ಎ.ಕೆ.ಅಶ್ರಫ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT