ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ನಿಪಾ ಸೋಂಕಿತರ ಚಿಕಿತ್ಸೆಗೆ ಮೊನೊಕ್ಲೋನಲ್ ಪ್ರತಿಕಾಯ ತಲುಪಿಸಿದ ಐಸಿಎಂಆರ್

Published : 15 ಸೆಪ್ಟೆಂಬರ್ 2023, 3:10 IST
Last Updated : 15 ಸೆಪ್ಟೆಂಬರ್ 2023, 3:10 IST
ಫಾಲೋ ಮಾಡಿ
Comments

ತಿರುವನಂತಪುರಂ/ನವದೆಹಲಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿರುವ ನಿಪಾ ವೈರಸ್ ಸೋಂಕಿತರ ಚಿಕಿತ್ಸೆಗೆ ಕೋರಿದ್ದ ಪ್ರತಿಕಾಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಕೇರಳ ರಾಜ್ಯಕ್ಕೆ ತಲುಪಿಸಿದೆ. ಸೋಂಕಿತರ ಮಾದರಿಗಳ ಪರೀಕ್ಷೆಗೆ ಮೊಬೈಲ್ ಪ್ರಯೋಗಾಲಯವನ್ನು ಸಹ ಸ್ಥಾಪಿಸಲಾಗಿದೆ.

ಮೊನೊಕ್ಲೋನಲ್ ಪ್ರತಿಕಾಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಕೋಯಿಕ್ಕೋಡ್‌ಗೆ ತಲುಪಿಸಿದೆ. ವೈರಸ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸರ್ಕಾರಕ್ಕೆ ಲಭ್ಯವಿರುವ ಏಕೈಕ ಆಯ್ಕೆ ಆಂಟಿವೈರಲ್ ಆಗಿದೆ. ಆದರೂ ಅದರ ಪರಿಣಾಮಕಾರಿತ್ವ ಇನ್ನೂ ಪ್ರಾಯೋಗಿಕವಾಗಿ ಸಾಬೀತಾಗಿಲ್ಲ.

ಪುಣೆಯಲ್ಲಿರುವ ಭಾರತೀಯ ವೈರಾಣು ಸಂಸ್ಥೆ(ಎನ್‌ಐವಿ) ತನ್ನ ಮೊಬೈಲ್ ಬಿಎಸ್‌ಎಲ್ -3 (ಬಯೋಸೇಫ್ಟಿ ಲೆವೆಲ್ -3) ಪ್ರಯೋಗಾಲಯವನ್ನು ಕೋಯಿಕ್ಕೋಡ್‌ಗೆ ಕಳುಹಿಸಿದೆ.

ಈ ವರೆಗೆ ಕೇರಳದಲ್ಲಿ ನಿಪಾ ವೈರಸ್ ಸೋಂಕಿತ ಇಬ್ಬರು ಸಾವಿಗೀಡಾಗಿದ್ದು, ಒಟ್ಟು ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮಧ್ಯೆ, ಪರೀಕ್ಷೆಗೆ ಕಳುಹಿಸಲಾದ 11 ಮಂದಿ ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಹೆಚ್ಚಿನ ಅಪಾಯದ ಸಂಪರ್ಕ ಪಟ್ಟಿಯಲ್ಲಿರುವ ಇನ್ನೂ 15 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೇರಳದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಪಾ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಆರ್‌ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ನ ತಜ್ಞರನ್ನೊಳಗೊಂಡ ಐದು ಸದಸ್ಯರ ಕೇಂದ್ರ ತಂಡವು ಕೋಯೊಕ್ಕೋಡ್‌ನಲ್ಲಿ ಬೀಡುಬಿಟ್ಟಿದೆ.

ವೈರಸ್ ಇರುವಿಕೆಯನ್ನು ಪರೀಕ್ಷಿಸಲು ಬಾವಲಿಗಳಿಂದಲೂ ಸಹ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT