ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಅಧಿಕಾರದ ಬಗ್ಗೆ ನಿಯಮ ರೂಪಿಸಿ: ಸುಪ್ರೀಂಕೋರ್ಟ್‌ಗೆ ಕೇರಳ ಸರ್ಕಾರ ಮನವಿ

Published 30 ಡಿಸೆಂಬರ್ 2023, 15:52 IST
Last Updated 30 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಗಳ ಶಾಸನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡುವ ಸಂಬಂಧ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಕುರಿತು ನಿಯಮಗಳನ್ನು ರೂಪಿಸಬೇಕು ಎಂದು ಕೇರಳ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತು ಸಲ್ಲಿಸಿರುವ ಅರ್ಜಿಯಲ್ಲಿ, ‘ಶಾಸನಸಭೆಯು ಅಂಗೀಕರಿಸಿದ ಮಸೂದೆಯನ್ನು ಕಾಯ್ದಿಡುವ ಅಧಿಕಾರಾವಧಿ, ಅನುಮೋದನೆ ನೀಡದೆ ಸಂದೇಶದೊಂದಿಗೆ ಸರ್ಕಾರಕ್ಕೆ ಹಿಂದಿರುಗಿಸುವ ಕುರಿತಂತೆ ನಿಯಮವನ್ನು ರೂಪಿಸಬೇಕು’ ಎಂದು ಕೋರಿದೆ.

ಕೇರಳ ಸರ್ಕಾರವು ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ, ಎಂಟು ಮಸೂದೆಗಳಿಗೆ ಅನುಮೋದನೆ ನೀಡದ ರಾಜ್ಯಪಾಲರ ನಿಷ್ಕ್ರಿಯತೆಯನ್ನು ಪ್ರಶ್ನಿಸಿತ್ತು. ವಿಳಂಬ ಕುರಿತು ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್‌ 2023ರ ನವೆಂಬರ್ 20ರಂದು ನೋಟಿಸ್ ಜಾರಿ ಮಾಡಿತ್ತು.

ನೋಟಿಸ್‌ ಜಾರಿ ಬಳಿಕ ರಾಜ್ಯಪಾಲರು ಎಂಟರಲ್ಲಿ ಏಳು ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಾಯ್ದಿರಿಸಿದ್ದರು. ಮಸೂದೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿರಲಿಲ್ಲ ಹಾಗೂ ಅನುಮೋದನೆ ನೀಡದೇ ಬಾಕಿ ಉಳಿಸಲು ಕಾರಣವನ್ನೂ ನೀಡಿರಲಿಲ್ಲ. ಇವುಗಳಲ್ಲಿ ಮೂರು ಎರಡು ವರ್ಷಕ್ಕೂ ಹೆಚ್ಚು ಅವಧಿಯಿಂದ, ಮೂರಕ್ಕೂ ಹೆಚ್ಚು ಮಸೂದೆಗಳು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನುಮೋದನೆಗೆ ಬಾಕಿ ಉಳಿದಿದ್ದವು.

‘ರಾಜ್ಯಪಾಲರು ಸಂವಿಧಾನದ ವಿಧಿ 200ರ ಅನ್ವಯ ತಮಗೆ ದತ್ತವಾಗಿರುವ ಅಧಿಕಾರದನ್ವಯ ಮಸೂದೆಗಳಿಗೆ ಅನುಮೋದನೆಯನ್ನು ನೀಡದೇ ಸುದೀರ್ಘ ಅವಧಿಗೆ ಬಾಕಿ ಉಳಿಸುವ ಕಾರಣದಿಂದ ಹಲವು ರಾಜ್ಯಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಕೆಲವು ಬಾರಿ ಶಾಸನಸಭೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲೂ ಆಗುತ್ತಿಲ್ಲ’ ಎಂದು ಕೇರಳ ಸರ್ಕಾರ ಅರ್ಜಿಯಲ್ಲಿ ಪ್ರತಿಪಾದಿಸಿದೆ.

ಮುಂದುವರಿದು, ಎಂಟು ಮಸೂದೆಗಳನ್ನು (ಹಣಕಾಸು ಮಸೂದೆ ಒಳಗೊಂಡು) ರಾಜ್ಯ ಶಾಸನಸಭೆಯು ಆಗಸ್ಟ್‌–ಸೆಪ್ಟೆಂಬರ್‌ 2023ರಲ್ಲಿ ಅಂಗೀಕರಿಸಿದೆ. ಇವು ಕೂಡಾ ರಾಜ್ಯಪಾಲರ ಅನುಮೋದನೆಗಾಗಿ ಬಾಕಿ ಉಳಿದಿವೆ. ಹೀಗಾಗಿ, ಸುಪ್ರೀಂ ಕೋರ್ಟ್‌ನ ಅನುಮತಿ ಅಗತ್ಯವಾಗಿದೆ ಎಂದು ಹೇಳಿದೆ. 

ರಾಜ್ಯಪಾಲರ ಅಧಿಕಾರ ವ್ಯಾಪ್ತಿಯು ಸೀಮಿತವಾಗಿದೆ. ಅವರು ಮನಸೋಇಚ್ಛೆಯಿಂದ ಕಾರ್ಯನಿರ್ವಹಿಸಲಾಗದು. ಸಂವಿಧಾನದ ವಿಧಿ 200ರ ಅನುಸಾರ ಕರ್ತವ್ಯ ನಿಭಾಯಿಸುವಾಗ ಅವರು ಕಾರಣಗಳನ್ನು ನೀಡುವುದು ಅಗತ್ಯವಾಗಿದೆ ಎಂದು ಸರ್ಕಾರ ಅರ್ಜಿಯಲ್ಲಿ ಪ್ರತಿಪಾದಿಸಿದೆ. 

ತಮಿಳುನಾಡು ಸಿ.ಎಂ ರಾಜ್ಯಪಾಲರ ಭೇಟಿ ‘ಸೌಹಾರ್ದ’– 9 ಮಸೂದೆ ಕಳುಹಿಸಲು ಕ್ರಮ 

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ಅವರು ರಾಜಭವನದಲ್ಲಿ ಶನಿವಾರ ‘ಸೌಹಾರ್ದ’ವಾಗಿ ಭೇಟಿ ಮಾಡಿದ್ದು ಬಾಕಿ ಮಸೂದೆಗಳ ಸ್ಥಿತಿಗತಿ ಕುರಿತು ಚರ್ಚಿಸಿದರು.

‘ಪರಸ್ಪರ ಭೇಟಿ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ’ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ರಾಜ್ಯಪಾಲರಿಗೆ ನೀಡಿದ್ದ ಸಲಹೆಯ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಿತು. 

‘ಭೇಟಿ ಸೌಹಾರ್ದವಾಗಿತ್ತು. ಅನುಮೋದನೆಗೆ ಬಾಕಿ ಇದ್ದ 10 ಮಸೂದೆಗಳಲ್ಲಿ 9 ಮಸೂದೆಗಳನ್ನು ರಾಷ್ಟ್ರಪತಿಯವರಿಗೆ ಅಂಕಿತಕ್ಕಾಗಿ ಕಳುಹಿಸಲು ರಾಜ್ಯಪಾಲರು ಒಪ್ಪಿದ್ದಾರೆ’ ಎಂದು ಕಾನೂನು ಸಚಿವ ಎಸ್‌.ರಘುಪತಿ ತಿಳಿಸಿದರು.

ಮಸೂದೆಗಳಲ್ಲದೆ ಎಐಎಡಿಎಂಕೆ ಇಬ್ಬರು ಮಾಜಿ ಸಚಿವರ ವಿರುದ್ಧ ವಿಚಾರಣೆ ಹಾಗೂ ಮಾಜಿ ಮುಖ್ಯಮಂತ್ರಿ ಸಿ.ಎನ್‌.ಅಣ್ಣಾದೊರೈ ಜನ್ಮದಿನ ನಿಮಿತ್ತ 112 ಕೈದಿಗಳ ಬಿಡುಗಡೆಗೆ ಅನುಮತಿ ಕೋರಿ ಸರ್ಕಾರ ಪ್ರಸ್ತಾವ ಕಳುಹಿಸಿತ್ತು. ರಾಜ್ಯಪಾಲರ ಅನುಮೋದನೆ ದೊರೆಯದೆ ಇವು ನನೆಗುದಿಯಲ್ಲಿದ್ದ ವಿಷಯ ಆಡಳಿತರೂಢ ಡಿಎಂಕೆ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಹಲವು ತಿಂಗಳಿಂದ ಸಂಘರ್ಷ ಕಾರಣವಾಗಿದ್ದು ಅನಿಶ್ಚಿತತೆ ಮೂಡಿತ್ತು. ತಮಿಳುನಾಡು ಸರ್ಕಾರವು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದು ಮಸೂದೆಗಳ ಕುರಿತು ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಅನಿಶ್ಚಿತತೆ ಕೊನೆಗಾಣಿಸಲು ಮುಖ್ಯಮಂತ್ರಿಯವರ ಜೊತೆಗೆ ಸಭೆ ನಡೆಸಬೇಕು ಎಂದು ರಾಜ್ಯಪಾಲರಿಗೆ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಶನಿವಾರ ರಾಜಭವನಕ್ಕೆ ತೆರಳಿದ್ದರು. ಇಬ್ಬರು ಪರಸ್ಪರರನ್ನು ಶಾಲು ಹೊದಿಸಿ ಗೌರವಿಸಿದ್ದು ಚರ್ಚೆ ನಡೆಸಿದರು. ಮುಖ್ಯಮಂತ್ರಿಯವರ ಜೊತೆಯಲ್ಲಿ ಸಚಿವರಾದ ದೊರೈಮುರುಗನ್ ತಂಗಂ ತೆನ್ನರಸು ಆರ್‌.ಎಸ್‌.ರಾಜಕಣ್ಣಪ್ಪನ್ ಎಸ್‌.ರಘುಪತಿ ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT