ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಬೋಗಿಯೊಳಗೆ ಬೆಂಕಿ ಹಚ್ಚಿದ ಪ್ರಕರಣ: ಶಂಕಿತ ಆರೋಪಿಯ ಮಾಹಿತಿ, ತನಿಖೆ ಚುರುಕು

Last Updated 4 ಏಪ್ರಿಲ್ 2023, 11:52 IST
ಅಕ್ಷರ ಗಾತ್ರ

ಕಣ್ಣೂರು: ಕೋಯಿಕ್ಕೋಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರ ವಿಶೇಷ ತನಿಖಾ ತಂಡವು (ಎಸ್‌ಐಟಿ) ಚುರುಕುಗೊಳಿಸಿದ್ದು, ಶಂಕಿತ ಆರೋಪಿಯ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ದುಷ್ಕರ್ಮಿ ಬೆಂಕಿ ಹಚ್ಚಿರುವ ಆಲಪ್ಪುಳ–ಕಣ್ಣೂರು ಎಕ್ಸಿಕ್ಯುಟಿವ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯನ್ನು ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳು (ಎನ್ಐಎ) ಮತ್ತು ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಐ.ಜಿ. ಜಿ.ಎಂ. ಈಶ್ವರ ರಾವ್‌ ಪರಿಶೀಲಿಸಿದ್ದಾರೆ.

‘ಆರೋಪಿಯ ಕುರಿತು ನಮಗೆ ಹೆಚ್ಚಿನ ಮಾಹಿತಿ ಲಭಿಸಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ. ತನಿಖೆಯು ಈಗ ಪ್ರಾಥಮಿಕ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಎಡಿಜಿಪಿ ಎಂ.ಆರ್. ಅಜಿತ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತನಿಖೆಯ ಪ್ರಗತಿ ಪರಿಶೀಲಿಸಲು ಆರ್‌ಪಿಎಫ್‌ ಮತ್ತು ಕೇರಳ ಪೋಲಿಸರ ಉನ್ನತ ಮಟ್ಟದ ಸಭೆ ಮಂಗಳವಾರ ಕಣ್ಣೂರಿನಲ್ಲಿ ನಡೆದಿದೆ.

‘ಪ್ರಕರಣದ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಮತ್ತು ಬೋಗಿಗಳಲ್ಲಿ ಇನ್ನಷ್ಟು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಈಶ್ವರ ರಾವ್‌ ತಿಳಿಸಿದ್ದಾರೆ.

ಪ್ರಯಾಣಿಕರ ಸಹಾಯದಿಂದ ರಚಿಸಿರುವ ಶಂಕಿತ ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಸೋಮವಾರ ಬಿಡುಗಡೆಗೊಳಿಸಿದ್ದರು.

ಭಾನುವಾರ ರಾತ್ರಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ದುಷ್ಕರ್ಮಿಯೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪರಿಣಾಮ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು. ಬೋಗಿಯೊಳಗೆ ಬೆಂಕಿ ಹತ್ತಿಕೊಂಡಾಗ ರೈಲಿನಿಂದ ಕೆಳಗೆ ಹಾರಿದ ಪರಿಣಾಮ ಈ ಮೂವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT