ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ: ಮಹಾ ಪಂಚಾಯತ್‌ ಶಪಥ

ಕುಸ್ತಿಪಟುಗಳ ಪ್ರತಿಭಟನೆ: ಬ್ರಿಜ್‌ಭೂಷಣ್‌ ಬಂಧನಕ್ಕೆ ‘ಮಹಾ ಪಂಚಾಯತ್‌’ ಆಗ್ರಹ
Published 1 ಜೂನ್ 2023, 15:34 IST
Last Updated 1 ಜೂನ್ 2023, 15:34 IST
ಅಕ್ಷರ ಗಾತ್ರ

ಲಖನೌ/ಮುಜಫ್ಫರನಗರ (ಉತ್ತರಪ್ರದೇಶ): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಾಧ್ಯವಿರುವ ಎಲ್ಲ ಹೋರಾಟ ನಡೆಸುವುದಾಗಿ ‘ಮಹಾಪಂಚಾಯತ್’ ಗುರುವಾರ ಶಪಥ ಮಾಡಿದೆ. ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೆ ಹೋರಾಟವನ್ನು ಕೈಬಿಡದಿರಲೂ ತೀರ್ಮಾನಿಸಿದೆ.

ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ಬಂಧಿಸಬೇಕು ಎಂಬ ಕುಸ್ತಿಪಟುಗಳ ಬೇಡಿಕೆಗೆ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ ರೈತರ ‘ಮಹಾಪಂಚಾಯತ್’, ‘ಈ ಹೋರಾಟದಲ್ಲಿ ನಮ್ಮ ಪುತ್ರಿಯರ (ಮಹಿಳಾ ಕುಸ್ತಿಪಟುಗಳು) ಬೆನ್ನಿಗೆ ದೃಢವಾಗಿ ನಿಲ್ಲಲಾಗುವುದು’ ಎಂದು ಘೋಷಿಸಿದೆ.

ರಾಜಧಾನಿ ಲಖನೌದಿಂದ 500 ಕಿ.ಮೀ. ದೂರವಿರುವ ಮುಜಫ್ಫರನಗರ ಜಿಲ್ಲೆಯ ಸೋರಮ್ ಗ್ರಾಮದಲ್ಲಿ ನಡೆದ ‘ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ಮುಖಂಡ ಮಾಂಗೆರಾಮ್‌ ತ್ಯಾಗಿ, ‘ಮಹಿಳಾ ಕುಸ್ತಿಪಟುಗಳು ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರಿಗೆ ನ್ಯಾಯ ಸಿಗುವಂತೆ ಮಾಡಲು ಎಲ್ಲ ರೀತಿಯ ಹೋರಾಟ ನಡೆಸುತ್ತೇವೆ’ ಎಂದರು.

‘ಜಾತಿ ಆಧಾರದ ಮೇಲೆ ಕುಸ್ತಿಪಟುಗಳನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕಿಡಿಕಾರಿದ ತ್ಯಾಗಿ, ‘ಕುಸ್ತಿಪಟುಗಳು ಪದಕಗಳನ್ನು ಗೆದ್ದಾಗ ಯಾರಾದರೂ ಅವರ ಜಾತಿಯ ಬಗ್ಗೆ ಕೇಳಿದ್ದರೇ’ ಎಂದು ಪ್ರಶ್ನಿಸಿದರು.

ಸಿಂಗ್‌ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಕುಸ್ತಿಪಟುಗಳು ತಾವು ಗೆದ್ದಿರುವ ಪದಕಗಳನ್ನು ಗಂಗಾ ನದಿಯಲ್ಲಿ ಹಾಕಲು ಬುಧವಾರ ಹರಿದ್ವಾರಕ್ಕೆ ತೆರಳಿದ್ದರು. ಪದಕಗಳನ್ನು ನದಿಯಲ್ಲಿ ಹಾಕದಂತೆ ಅವರ ಮನವೊಲಿಸಿದ್ದ ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯತ್, ಕುಸ್ತಿಪಟುಗಳ ಪ್ರತಿಭಟನೆ ಕುರಿತು ಚರ್ಚಿಸಲು ‘ಮಹಾ ಪಂಚಾಯತ್‌’ ಆಯೋಜಿಸುವುದಾಗಿ ಹರಿದ್ವಾರದಲ್ಲಿ ಘೋಷಿಸಿದ್ದರು.

ಟಿಕಾಯತ್ ಅವರು ಬಲ್ಯಾನ್‌ ಖಾಪ್‌ ಮುಖ್ಯಸ್ಥರೂ ಆಗಿದ್ದಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯ ಖಾಪ್‌ಗಳ ಮುಖಂಡರು ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡಿದ್ದರು.

‘ಮಹಾಪಂಚಾಯತ್‌’ಗೆ ಮಹತ್ವ: ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪೈಕಿ ಹಲವರು ಜಾಟ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಈ ಸಮುದಾಯದವರ ಜನಸಂಖ್ಯೆ ಹೆಚ್ಚಿದ್ದು, 12ರಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಜಾಟ್‌ಗಳ ಮತ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ನಡೆದ ‘ಮಹಾಪಂಚಾಯತ್‌’ಗೆ ಮಹತ್ವ ಬಂದಿದೆ.

ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಕುರಿತು ಚರ್ಚಿಸಲು ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯ ಸೋರಮ್‌ ಗ್ರಾಮದಲ್ಲಿ ಗುರುವಾರ ನಡೆದ ರೈತರ ‘ಮಹಾಪಂಚಾಯತ್’ ಉದ್ದೇಶಿಸಿ ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್‌ ಮಾತನಾಡಿದರು –ಪಿಟಿಐ ಚಿತ್ರ 
ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಕುರಿತು ಚರ್ಚಿಸಲು ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯ ಸೋರಮ್‌ ಗ್ರಾಮದಲ್ಲಿ ಗುರುವಾರ ನಡೆದ ರೈತರ ‘ಮಹಾಪಂಚಾಯತ್’ ಉದ್ದೇಶಿಸಿ ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್‌ ಮಾತನಾಡಿದರು –ಪಿಟಿಐ ಚಿತ್ರ 
ಕುಸ್ತಿಪಟುಗಳ ವಿಷಯವನ್ನು ಕೇಂದ್ರ ಸರ್ಕಾರ ಬಹಳ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. ಪ್ರತಿಭಟನಕಾರರ ಬೇಡಿಕೆಯಂತೆ ಅವರ ಆರೋಪಗಳ ಕುರಿತು ತನಿಖೆಗೆ ಸಮಿತಿ ರಚಿಸಲಾಗಿದೆ..
ಅನುರಾಗ್‌ ಠಾಕೂರ್‌ ಕೇಂದ್ರ ಕ್ರೀಡಾ ಸಚಿವ

ಕುಸ್ತಿಪಟುಗಳು ಬೇಡಿಕೆ ಬದಲಾಯಿಸುತ್ತಿದ್ದಾರೆ: ಸಿಂಗ್

ಗೊಂಡಾ(ಉತ್ತರ ಪ್ರದೇಶ): ‘ನನ್ನ ವಿರುದ್ಧದ ಆರೋಪಗಳ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಮಹಿಳಾ ಕುಸ್ತಿಪಟುಗಳು ನನ್ನ ವಿರುದ್ಧ ಪ್ರತಿಭಟನೆ ಆರಂಭಿಸಿದಾಗಿನಿಂದ ತಮ್ಮ ಬೇಡಿಕೆಗಳನ್ನು ಬದಲಿಸುತ್ತಲೇ ಇದ್ದಾರೆ’ ಎಂದು ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್ ಗುರುವಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜನವರಿ 18ರಂದು ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿದ್ದ ಕುಸ್ತಿಪಟುಗಳು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಕೆಲ ದಿನಗಳ ನಂತರ ಬೇಡಿಕೆಗಳು ಬದಲಾದವು’ ಎಂದರು. ‘ನಾನು ಏನು ತಪ್ಪು ಮಾಡಿದ್ದೇನೆ? ಯಾವಾಗ ಹಾಗೂ ಎಲ್ಲಿ ಕಿರುಕುಳ ನೀಡಿದ್ದೇನೆ ಎಂದು ಮಹಿಳಾ ಕುಸ್ತಿಪಟುಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಅವರು ನಿಖರವಾದ ಉತ್ತರ ನೀಡಿಯೇ ಇಲ್ಲ’ ಎಂದು ಸಿಂಗ್‌ ಹೇಳಿದರು.

ಮತಪ್ರದರ್ಶನ– ಪ್ರತಿಕೃತಿ ದಹನ

* ಉತ್ತರ ಪ್ರದೇಶದ ಮುಜಫ್ಫರನಗರದಲ್ಲಿ ಆರ್‌ಎಲ್‌ಡಿ ಕಾರ್ಯಕರ್ತರು ಅಮೃತಸರ ಹಿಸಾರ್‌ದಲ್ಲಿ ರೈತರು ಬ್ರಿಜ್‌ಭೂಷಣ್‌ ಸಿಂಗ್‌ ಪ್ರತಿಕೃತಿ ದಹನ ಮಾಡಿದರು

* ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಚಂಡೀಗಡದಲ್ಲಿ ಯುವ ಕಾಂಗ್ರೆಸ್‌ ಉತ್ತರ ಪ್ರದೇಶದ ಮೀರಠ್‌ನಲ್ಲಿ ಬಿಕೆಯು ಕಾರ್ಯಕರ್ತರಿಂದ ಮತಪ್ರದರ್ಶನ

* ಬ್ರಿಜ್‌ಭೂಷಣ್‌ ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರಿಂದ ಪಂಜಾಬ್‌ ಮತ್ತು ಹರಿಯಾಣದ ವಿವಿಧೆಡೆ ಪ್ರತಿಭಟನೆ

* ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ)  ಗುರುವಾರ ದೇಶವ್ಯಾಪಿ ಮತಪ್ರದರ್ಶನಕ್ಕೆ ಕರೆ ನೀಡಿದ್ದರಿಂದ ದೆಹಲಿ ಗಡಿಗಳಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿತ್ತು.

* ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ದ ಕೆಲ ಮಹಿಳಾ ಕುಸ್ತಿಪಟುಗಳು ದೂರು ನೀಡಿರುವ ಪ್ರಕರಣದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎಂದು ಮಹಾರಾಷ್ಟ್ರದ ಬಿಜೆಪಿ ಸಂಸದೆ ಪ್ರೀತಂ ಮುಂಡೆ ಹೇಳಿಕೆ

* ಕುಸ್ತಿಪಟುಗಳ ಈ ಪ್ರತಿಭಟನೆ ತಮ್ಮ ಬದುಕು ನ್ಯಾಯ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ಅವರಿಗೆ ನ್ಯಾಯ ಸಿಗುವವರೆಗೆ ನಾನು ಹೋರಾಟ ನಡೆಸುವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ

ರಾಷ್ಟ್ರಪತಿ ಬಳಿ ನಿಯೋಗ: ರಾಕೇಶ್

ಮುಜಫ್ಫರನಗರ: ‘ಹರಿಯಾಣದ ಕುರುಕ್ಷೇತ್ರದಲ್ಲಿ ಶುಕ್ರವಾರ ಖಾಪ್‌ ಮುಖಂಡರ ಮತ್ತೊಂದು ಸಭೆ ನಡೆಸಿ ಕುಸ್ತಿಪಟುಗಳ ಹೋರಾಟ ಕುರಿತು ಮತ್ತಷ್ಟು ನಿರ್ಧಾರಗಳನ್ನು ಕೈಗೊಳ್ಳಲಾಗುವುದು’ ಎಂದು ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದರು. ‘ಮಹಾ ಪಂಚಾಯತ್’ ಉದ್ದೇಶಿಸಿ ಮಾತನಾಡಿದ ಅವರು ‘ಎಲ್ಲ ಖಾಪ್‌ಗಳ ಪ್ರತಿನಿಧಿಗಳ ನಿಯೋಗ ಒಯ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಕುಸ್ತಿಪಟುಗಳ ಬೇಡಿಕೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಲಾಗುವುದು. ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಆಗಲೂ ಕ್ರಮ ಕೈಗೊಳ್ಳದಿದ್ದರೆ ನಮ್ಮ ಹೋರಾಟದ ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT