ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಹಂತದಲ್ಲಿ ಉತ್ತರದಾಯಿತ್ವ ಅಗತ್ಯ: ಖರ್ಗೆ ಪ್ರತಿಪಾದನೆ

ಕಾಂಗ್ರೆಸ್‌ ಸಂಚಾಲನಾ ಸಮಿತಿ ಸಭೆ * ಜವಾಬ್ದಾರಿ ನಿರ್ವಹಿಸದಿದ್ದರೆ ಹುದ್ದೆ ತೊರೆಯಲು ತಾಕೀತು
Last Updated 4 ಡಿಸೆಂಬರ್ 2022, 10:55 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷ ಸಂಘಟನೆ ಬಲಪಡಿಸುವ ಸಲುವಾಗಿ ಕೆಳಹಂತದಿಂದ ಹಿಡಿದು ಉನ್ನತ ಮಟ್ಟದವರೆಗೆ ಉತ್ತರಾಯಿತ್ವ ಅಗತ್ಯ’ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ವಹಿಸಿದ ಜವಾಬ್ದಾರಿಯನ್ನು ನಿರ್ವವಹಿಸಲು ವಿಫಲರಾದವರು ಹುದ್ದೆ ತೊರೆಯಿರಿ. ಬೇರೆಯವರಿಗೆ ಜವಾಬ್ದಾರಿಯನ್ನು ವಹಿಸಲಾಗುವುದು’ ಎಂದು ಹೇಳಿದರು.

ಪಕ್ಷದ ಅಧ್ಯಕ್ಷರಾದ ನಂತರ ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್‌ ಚಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷ ಸಂಘಟನೆ ಮಾಡಿದರೂ ಬಂತು, ಮಾಡದಿದ್ದರೂ ಬಂತು. ವರಿಷ್ಠರು ಇದನ್ನೆಲ್ಲಾ ಗಮನಿಸುವುದಿಲ್ಲ ಎಂಬ ಮನೋಭಾವ ಕೆಲವರಲ್ಲಿದೆ. ಇಂಥ ಧೋರಣೆ ಸರಿ ಅಲ್ಲ ಹಾಗೂ ಒಪ್ಪತಕ್ಕದ್ದೂ ಅಲ್ಲ’ ಎಂದು ಕಟುವಾಗಿ ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಸಂಘಟನೆ ಪ್ರಬಲವಾಗಿದ್ದು, ಉತ್ತರದಾಯಿತ್ವ ಹೊಂದಿದಾಗ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಬಹುದು. ಮುಂಬರುವ ಚುನಾವಣೆಗಳಲ್ಲಿ ಗೆದ್ದು, ಜನರ ಹಾಗೂ ದೇಶದ ಸೇವೆ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಜನಪರ ವಿಷಯಗಳನ್ನು ಮುಂದಿಟ್ಟುಕೊಂಡು 30 ರಿಂದ 90 ದಿನಗಳ ಕಾಲ ಹೋರಾಟ ನಡೆಸಬೇಕು. ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಬೇಕು’ ಎಂದು ಅವರು ರಾಜ್ಯಗಳ ಉಸ್ತುವಾರಿಗಳಿಗೆ ಸೂಚಿಸಿದರು.

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ನೀಲನಕ್ಷೆಯನ್ನು ಸಿದ್ಧಪಡಿಸುವಂತೆಯೂ ಖರ್ಗೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯ ಉಸ್ತುವಾರಿಗಳಿಗೆ ಸೂಚಿಸಿದರು.

ಎಐಸಿಸಿ ಆದೇಶದಂತೆ ಬ್ಲಾಕ್‌, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಎಷ್ಟು ಬಾರಿ ಹೋರಾಟಗಳನ್ನು ಮಾಡಲಾಗಿದೆ?, ಮುಂದಿನ ವರ್ಷ ಹಾಗೂ 2024ರಲ್ಲಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಂಬಂಧಪಟ್ಟ ಘಟಕಗಳು ಮಾಡಿಕೊಂಡಿರುವ ಸಿದ್ಧತೆಗಳೇನು’ ಎಂದು ಅವರು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಅವುಗಳ ರಕ್ಷಣೆಗಾಗಿ ಹೋರಾಟ ನಡೆಸುವುದು ಕಾಂಗ್ರೆಸ್‌ನ ಜವಾಬ್ದಾರಿ’ ಎಂದೂ ಖರ್ಗೆ ಹೇಳಿದರು.

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಫೆಬ್ರುವರಿಯಲ್ಲಿ ಸರ್ವ ಸದಸ್ಯರ ಸಭೆ

ಛತ್ತೀಸಗಡ ರಾಜಧಾನಿ ರಾಯಪುರದಲ್ಲಿ ಫೆಬ್ರುವರಿ ಎರಡನೇ ವಾರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಸಭೆಯನ್ನು ಆಯೋಜಿಸಲು ಚಾಲನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಈ ಮೂರು ದಿನಗಳ ಸರ್ವಸದಸ್ಯರ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ನಂತರ ಬೃಹತ್‌ ಸಾರ್ವಜನಿಕ ಸಭೆಯನ್ನು ಸಹ ಆಯೋಜಿಸಲಾಗುವುದು’ ಎಂದರು.

‘ಭಾರತ್‌ ಜೋಡೊ ಯಾತ್ರೆಯ ಮುಂದುವರಿದ ಭಾಗವಾಗಿ ಜನವರಿ 26ರಿಂದ ಎರಡು ತಿಂಗಳ ಕಾಲ ‘ಹಾಥ್‌ ಸೆ ಹಾಥ್‌ ಜೋಡೊ ಅಭಿಯಾನ್’ ನಡೆಸಲು ಸಹ ತೀರ್ಮಾನಿಸಲಾಯಿತು. ಭಾರತ್‌ ಜೋಡೊ ಯಾತ್ರೆಯ ಪರಾಮರ್ಶೆಯೂ ಸಭೆಯಲ್ಲಿ ನಡೆಯಿತು’ ಎಂದು ತಿಳಿಸಿದರು.

‘ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯನ್ನು ಜನವರಿ 26ರಂದು ಶ್ರೀನಗರದಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ. ಯಾತ್ರೆಯು ಡಿ. 24ರಂದು ದೆಹಲಿ ಪ್ರವೇಶಿಸಲಿದೆ’ ಎಂದು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT