ಭದೋಹಿ (ಉತ್ತರ ಪ್ರದೇಶ): ಮದುವೆಯಾಗುವುದಾಗಿ ನಂಬಿಸಿ ನರ್ಸ್‌ವೊಬ್ಬರ ಮೇಲೆ 21 ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ ಲ್ಯಾಬ್ ಟೆಕ್ನಿಷಿಯನ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನರ್ಸ್(36) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚಿಂತಮಣಿ ಶರ್ಮ(59) ಎಂಬವನನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಪ್ರಕರಣ ದಾಖಲಿಸಿಕೊಂಡ ಸೂರ್ಯವಾನ್ ಪೊಲೀಸರು ಆರೋಪಿಯನ್ನು ವಾರಾಣಸಿಯಲ್ಲಿ ಬಂಧಿಸಿದ್ದಾರೆ.
‘ಆರೋಪಿ ಮತ್ತು ಸಂತ್ರಸ್ತೆ ಒಂದೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಸಂತ್ರಸ್ತೆಯು 15 ವರ್ಷದ ಬಾಲಕಿಯಾಗಿದ್ದಾಗಿನಿಂದ ಆರೋಪಿಯ ಪರಿಚಯವಿತ್ತು. ಅವಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಹೇಳಿ ಅವರ ಕುಟುಂಬದೊಂದಿಗೆ ಆತ ವಾಸವಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದ ಆರೋಪಿ, ಬಳಿಕ ಪದೇ ಪದೇ ದೈಹಿಕ ಸಂಪರ್ಕ ಮಾಡಿದ್ದಾನೆ. ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆತ ಬೇರೊಬ್ಬರೊಂದಿಗೆ ವಿವಾಹವಾಗಿದ್ದ. ಆ ವಿಷಯವನ್ನು ಮುಚ್ಚಿಟ್ಟು ದೈಹಿಕ ಸಂಪರ್ಕ ಮಾಡುತ್ತಲೇ ಇದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಸಂತ್ರಸ್ತೆಗೆ ಭದೋಹಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ ಲಭಿಸಿತ್ತು. ವಾರಾಣಸಿಯಲ್ಲಿ ಉದ್ಯೋಗದಲ್ಲಿದ್ದ ಆರೋಪಿಯು ಭದೋಹಿಗೆ ಬಂದು ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡುತ್ತಿದ್ದ. ಮದುವೆಯಾಗಲು ಒತ್ತಾಯಿಸಿದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ, ಅವರ ಮನೆಗೆ ಹಾನಿ ಮಾಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.