ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಗಣತಿ ಜತೆ ಜಾತಿಗಣತಿ ನಡೆಯಲಿ: ಜೈರಾಮ್‌ ರಮೇಶ್‌ ಆಗ್ರಹ

Published : 22 ಆಗಸ್ಟ್ 2024, 14:14 IST
Last Updated : 22 ಆಗಸ್ಟ್ 2024, 14:14 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸರ್ಕಾರ ಜನಗಣತಿಯ ಜತೆಯಲ್ಲೇ ಜಾತಿಗಣತಿಯನ್ನೂ ಸುಲಭವಾಗಿ ನಡೆಸಬಹುದು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

‘1951ರಿಂದ ಪ್ರತಿ ಜನಗಣತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸುತ್ತಾ ಬರಲಾಗಿದೆ. ಜಾತಿಗಣತಿ ಪ್ರಶ್ನಾವಳಿಗೆ, ಹೆಚ್ಚುವರಿಯಾಗಿ ಒಂದು ಕಾಲಂ ಅನ್ನು ಸೇರಿಸುವ ಮೂಲಕ ಇತರೆ ಹಿಂದುಳಿದ ವರ್ಗಗಳ ಜಾತಿವಾರು ಮಾಹಿತಿಯನ್ನು ಯಾವುದೇ ತೊಂದರೆ ಇಲ್ಲದೆ ಸಂಗ್ರಹಿಸಬಹುದು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಗುರುವಾರ ಹೇಳಿದ್ದಾರೆ. 

‘ಸರ್ಕಾರ ಹೀಗೆ ಮಾಡಿದರೆ ಜಾತಿಗಣತಿ ನಡೆಸುವಂತೆ ಕೇಳಿಬರುತ್ತಿರುವ ಬೇಡಿಕೆಯನ್ನು ಈಡೇರಿಸಿದಂತೆ ಆಗಲಿದೆ ಮತ್ತು ಸರ್ಕಾರದ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಅನುಕೂಲ ಆಗಲಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಜನಗಣತಿ ಕಾರ್ಯ ವಿಳಂಬವಾಗಿರುವ ಕಾರಣ ಸರ್ಕಾರದ ಆರ್ಥಿಕ ಯೋಜನೆಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಿರುವ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮ, 12 ಕೋಟಿಗೂ ಹೆಚ್ಚು ಮಂದಿ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ದೊರೆಯಬೇಕಿದ್ದ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ’ ಎಂದಿದ್ದಾರೆ.

ಕೇಂದ್ರ ಸರ್ಕಾರ ಇದೇ ಸೆಪ್ಟೆಂಬರ್‌ನಲ್ಲಿ ಜನಗಣತಿ ಕಾರ್ಯ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ಹೇಳಿದ್ದವು. ಅದರ ಬೆನ್ನಲ್ಲೇ ಕಾಂಗ್ರೆಸ್‌ ಈ ಬೇಡಿಕೆಯಿಟ್ಟಿದೆ. ಜನಗಣತಿ ಕಾರ್ಯ ಯಾವಾಗ ಆರಂಭಿಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂದು ‘ಇಂಡಿಯಾ’ ಮೈತ್ರಿಕೂಟ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಪಕ್ಷವು ಒತ್ತಾಯ ಮಾಡುತ್ತಲೇ ಬಂದಿದೆ. ಈಚೆಗೆ ನಡೆದ ಲೋಕಸಭಾ ಚುನಾವಣೆಯ ಪ್ರಚಾರ ಅಭಿಯಾನದ ವೇಳೆಯೂ ವಿಪಕ್ಷಗಳು ಇದನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿದ್ದವು.

2011ರಲ್ಲಿ ಕೊನೆಯದಾಗಿ ಜನಗಣತಿ ನಡೆದಿತ್ತು. ನಿಗದಿಯಂತೆ 2021ರಲ್ಲಿ ನಡೆಯಬೇಕಿದ್ದರೂ, ಕೋವಿಡ್‌ ಕಾರಣ ನಡೆದಿರಲಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT