ನವದೆಹಲಿ: ಜನಾಂಗೀಯ ಹಿಂಸಾಚಾರದಲ್ಲಿ ತೊಡಗಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವನ್ನು ಮುನ್ನಡೆಸಿ ‘ಶಾಂತಿ ರ‍್ಯಾಲಿ’ ನಡೆಸಿದರೆ ಅವರೊಂದಿಗೆ ನಾವೂ ಸೇರಿಕೊಳ್ಳುತ್ತೇವೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
‘ಆಪ್ ಕಿ ಅದಾಲತ್’ ಟಿ.ವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಧೀರ್ ರಂಜನ್ ಅವರು, ‘ಮಣಿಪುರದ ಜನರು ಹೆದರಬೇಕಿಲ್ಲ. ರಾಜ್ಯದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಇಡೀ ದೇಶವೇ ನಿಮ್ಮೊಂದಿಗೆ ಇದೆ ಎಂದು ಮೋದಿ ಹೇಳಬೇಕು’ ಎಂದೂ ಆಗ್ರಹಿಸಿದ್ದಾರೆ.
‘ಮಣಿಪುರಕ್ಕೆ ಸಂಬಂಧಿಸಿದಂತೆ ಈ ಸಲಹೆಯನ್ನು ನಾವು ಸದನದಲ್ಲಿ ಲಿಖಿತವಾಗಿ ನೀಡಿದ್ದೇವೆ. ಆದರೆ, ಅದಕ್ಕೆ ಅವರು ಒಪ್ಪಿಗೆ ನೀಡಲಿಲ್ಲ. ಇದು ಬಹುಮತದ ದುರಹಂಕಾರವೇ ಹೊರತು ಬೇರೇನೂ ಅಲ್ಲ’ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಧಾನಿ ಅವರು ಮಣಿಪುರದ ಕುರಿತು ಮಾತನಾಡುವ ಮುನ್ನವೇ ವಿರೋಧಪಕ್ಷಗಳು ಸದನದಿಂದ ಹೊರಹೋದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಭಾಷಣದ ಸಮಯದಲ್ಲಿ ನಾವು ಮಣಿಪುರದ ಕುರಿತು ಅವರು ಮಾತನಾಡುತ್ತಾರೆ ಎಂದು ಎರಡು ಗಂಟೆಗಳ ಕಾಲ ಕಾದೆವು. ಆದರೆ, ಅವರು ಮಾತನಾಡಲಿಲ್ಲ. ಭಾಷಣದ ವೇಳೆ ಅವರ ಪಕ್ಷದ ಸಚಿವರೇ ನಿದ್ದೆ ಮಾಡಲು ಶುರುಮಾಡಿದರು. ಬೇಕಿದ್ದರೆ ಈ ಸಂಬಂಧ ನೀವು ಸದನದ ವಿಡಿಯೊ ನೋಡಬಹುದು’ ಎಂದೂ ಅವರು ತಿಳಿಸಿದ್ದಾರೆ.
‘ಪ್ರಧಾನಿ ಮಣಿಪುರದ ವಿಷಯ ಕುರಿತು ಕೇವಲ ಮೂರು ನಿಮಿಷ ಮಾತ್ರ ಮಾತನಾಡಿದರು. ಅವರು ಮಣಿಪುರದ ಬಗ್ಗೆ ಮಾತನಾಡುತ್ತಾರೆ ಎಂದು ನಮಗೆ ತಿಳಿದಿದ್ದರೆ ಖಂಡಿತವಾಗಿಯೂ ನಾವು ಸದನದಿಂದ ಹೊರಬರುತ್ತಿರಲಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.