ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಸಂಘರ್ಷ: ವೈಮಾನಿಕ ಕಣ್ಗಾವಲು ಹೆಚ್ಚಿಸಿದ ಸೇನೆ

Published 7 ಮೇ 2023, 10:53 IST
Last Updated 7 ಮೇ 2023, 10:53 IST
ಅಕ್ಷರ ಗಾತ್ರ

ಇಂಫಾಲ (ಮಣಿಪುರ)(ಪಿಟಿಐ): ಎರಡು ಸಮುದಾಯಗಳ ನಡುವಿನ ಸಂಘರ್ಷ, ಹಿಂಸಾಚಾರದಿಂದಾಗಿ ತತ್ತರಿಸಿದ್ದ ಮಣಿಪುರದ ಕೆಲ ಭಾಗಗಳಲ್ಲಿ ಭಾನುವಾರ ನಿಷೇಧಾಜ್ಞೆಯನ್ನು ಭಾಗಶಃ ತೆರವುಗೊಳಿಸಲಾಗಿದೆ. 

ಸೇನೆಯು ಡ್ರೋನ್‌ ಹಾಗೂ ಹೆಲಿಕಾಪ್ಟರ್‌ಗಳನ್ನು ನಿಯೋಜನೆ ಮಾಡುವ ಮೂಲಕ ಗಲಭೆ ಪೀಡಿತ ಪ್ರದೇಶಗಳ ಮೇಲೆ ತೀವ್ರ ನಿಗಾ ಇರಿಸಿದೆ. 

ಗಲಭೆಯಿಂದ ಹೆಚ್ಚು ಬಾಧಿತವಾಗಿರುವ ಚುರಚಾಂದಪುರ ಪಟ್ಟಣದಲ್ಲಿ ಬೆಳಿಗ್ಗೆ 7ರಿಂದ 10 ಗಂಟೆ ವರೆಗೆ ನಿಷೇಧಾಜ್ಞೆಯನ್ನು ಸಡಿಲಿಸಲಾಗಿತ್ತು. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕರ್ಫ್ಯೂ ಸಡಿಲಿಸಿದ್ದ ಅವಧಿ 10 ಗಂಟೆಗೆ ಮುಕ್ತಾಯಗೊಂಡ ಬೆನ್ನಲ್ಲೇ, ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ನ ಯೋಧರು ಪಟ್ಟಣದಲ್ಲಿ ಪಥಸಂಚಲನ ನಡೆಸಿ, ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

ರಾಜ್ಯದಲ್ಲಿ  ಭದ್ರತಾ ಪಡೆಗಳ 120–125 ತುಕಡಿಗಳನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆ, ಕೇಂದ್ರೀಯ ಪೊಲೀಸ್‌ ಪಡೆಗೆ ಸೇರಿದ 10 ಸಾವಿರದಷ್ಟು ಯೋಧರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಗಲಭೆಯಲ್ಲಿ ಗಾಯಗೊಂಡಿರುವ ಮಹಿಳೆಗೆ ಮಣಿಪುರ ರಾಜಧಾನಿ ಇಂಫಾಲದಲ್ನಿರುವ ಪರಿಹಾರ ಕೇಂದ್ರದಲ್ಲಿ ಅಸ್ಸಾಂ ರೈಫಲ್ಸ್‌ ಸಿಬ್ಬಂದಿಯೊಬ್ಬರು ಭಾನುವಾರ ಚಿಕಿತ್ಸೆ ನೀಡಿದರು –ಪಿಟಿಐ ಚಿತ್ರ
ಗಲಭೆಯಲ್ಲಿ ಗಾಯಗೊಂಡಿರುವ ಮಹಿಳೆಗೆ ಮಣಿಪುರ ರಾಜಧಾನಿ ಇಂಫಾಲದಲ್ನಿರುವ ಪರಿಹಾರ ಕೇಂದ್ರದಲ್ಲಿ ಅಸ್ಸಾಂ ರೈಫಲ್ಸ್‌ ಸಿಬ್ಬಂದಿಯೊಬ್ಬರು ಭಾನುವಾರ ಚಿಕಿತ್ಸೆ ನೀಡಿದರು –ಪಿಟಿಐ ಚಿತ್ರ

ರಕ್ಷಣೆ: ‘ಎಲ್ಲ ಸಮುದಾಯಗಳಿಗೆ ಸೇರಿದ 23 ಸಾವಿರ ಜನರನ್ನು ಈ ವರೆಗೆ ರಕ್ಷಿಸಲಾಗಿದ್ದು, ಸೇನಾ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ’ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.

‘ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಯೋಧರ ಅವಿರತ ಶ್ರಮದ ಫಲವಾಗಿ ಹಿಂಸಾಚಾರ ತಹಬದಿಗೆ ಬಂದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಳೆದ 96 ಗಂಟೆಗಳ ಅವಧಿಯಲ್ಲಿ ಯೋಧರು ದಣಿವರಿಯದಂತೆ ಕಾರ್ಯ ನಿರ್ವಹಿಸಿ ಜನರನ್ನು ರಕ್ಷಿಸಿದ್ದು, ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿಲ್ಲ. ಈ ಕಾರಣಕ್ಕೆ ಚುರಚಾಂದಪುರ ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ 7–10 ರವರೆಗೆ ಕರ್ಫ್ಯೂ ಸಡಿಸಲಾಗಿತ್ತು’ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

‘ಸರ್ಕಾರವು ವಿವಿಧ ಭಾಗಿದಾರ ಗುಂಪುಗಳ ಜೊತೆ ಮಾತುಕತೆ ನಡೆಸಿದ ನಂತರ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಹೀಗಾಗಿ, ಕೆಲವೆಡೆ ಕರ್ಫ್ಯೂವನ್ನು ಭಾಗಶಃ ಸಡಿಸಲಾಗಿದೆ’ ಎಂದು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಹೇಳಿದ್ದಾರೆ.

ರಾಷ್ಟ್ರಪತಿ ಆಡಳಿತ ಹೇರಲು ತರೂರ್‌ ಒತ್ತಾಯ

‘ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಭಾನುವಾರ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು ‘ತಾನು ನೀಡಿರುವ ಭರವಸೆಯಂತೆ ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಧಿಕಾರಕ್ಕೆ ಬಂದ ನಂತರ ಬಿಜೆಪಿಯು ತಮಗೆ ದ್ರೋಹ ಮಾಡಿದೆ ಎಂಬ ಭಾವನೆ ರಾಜ್ಯದ ಜನರ ಮನದಲ್ಲಿ ಮೂಡಿದೆ. ಈ ಕಾರಣ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಇದು ಸೂಕ್ತ ಸಮಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT