ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ, ಛತ್ತೀಸಗಢ ವಿಧಾನಸಭೆ ಚುನಾವಣೆ: ಕೈ, ಕಮಲಕ್ಕೆ ಗೆಲುವಿನ ವಿಶ್ವಾಸ

Published 17 ನವೆಂಬರ್ 2023, 16:06 IST
Last Updated 17 ನವೆಂಬರ್ 2023, 16:06 IST
ಅಕ್ಷರ ಗಾತ್ರ

ಭೋಪಾಲ್‌/ ರಾಯಪುರ: ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಇತ್ತು. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. 

ಎರಡೂ ಪಕ್ಷಗಳು ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿವೆ. ಆದರೆ, ಎಸ್‌ಪಿ, ಬಿಎಸ್‌ಪಿ, ಹಮರ್ ರಾಜ್ ಪಾರ್ಟಿ, ಜೆಡಿಯು, ಎಎಪಿ ಮತ್ತು ಗೊಂಡವಾನ ಗಣತಂತ್ರ ಪಾರ್ಟಿ (ಜಿಜಿಪಿ)ಯಂತಹ ಸಣ್ಣ ಪಕ್ಷಗಳು ಈ ಎರಡೂ ಪಕ್ಷಗಳ ಗೆಲುವಿನ ಓಟಕ್ಕೆ ತಡೆ ನೀಡುವ ಸಾಧ್ಯತೆ ಯೂ ಇದೆ. 

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ) ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ (ಕಾಂಗ್ರೆಸ್) ಮುಂಚೂಣಿಯಲ್ಲಿದ್ದರೆ, ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ 2018ರ ಫಲಿತಾಂಶ ಪುನರಾವರ್ತನೆಯನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿ ಪ್ರಚಾರವನ್ನು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಮುನ್ನಡೆಸಿದ್ದಾರೆ.

ಘರ್ಷಣೆ ನಿಯಂತ್ರಣಕ್ಕೆ: ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭೆಗೆ ಶುಕ್ರವಾರ ನಡೆದ ಚುನಾವಣೆ ವೇಳೆ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆದ ವರದಿ ಆಗದಿದ್ದರೂ ಅಲ್ಲಲ್ಲಿ ನಡೆದ ಘರ್ಷಣೆಗಳನ್ನು ಸಕಾಲದಲ್ಲಿ ನಿಯಂತ್ರಣಕ್ಕೆ ತರಲಾಯಿತು.

ಮಧ್ಯಪ್ರದೇಶದ ಸೊನೆವಾನಿ ಮತಗಟ್ಟೆಯಲ್ಲಿ ಶೇಕಡಾ ನೂರರಷ್ಟು ಮತದಾನವಾಗಿದೆ. ಇಲ್ಲಿ 26 ಮಹಿಳೆಯರು ಮತ್ತು 16 ಪುರುಷರು ಸೇರಿ ಒಟ್ಟು 42 ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುಂತೆ ಛತ್ತೀಸಗಢದ ಭರತ್‌ಪುರ– ಸೋನ್‌ಹತ್‌ನಲ್ಲಿ11 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ 100ಕ್ಕಿಂತ ಸ್ವಲ್ಪ ಹೆಚ್ಚು ಮತದಾರರು ಇದ್ದರು. ಶೆರದಂಡ್‌ನ ಮತಗಟ್ಟೆಯಲ್ಲಿ ಕೇವಲ ಐವರು ಮತದಾರರಿದ್ದರು. ಈ ಮತಗಟ್ಟೆಗಳು ವಸತಿ ಪ್ರದೇಶದಿಂದ ದೂರದಲ್ಲಿದ್ದವು ಎಂದು ಆಯೋಗ ಹೇಳಿದೆ.

ಎರಡೂ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದವರು ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಈ ಸಮುದಾಯದಲ್ಲಿ 7.52 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿನ ಒಟ್ಟು 7.23 ಕೋಟಿ ಮತದಾರರು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಮತ ಚಲಾಯಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದು ಆಯೋಗ ಹೇಳಿದೆ.

ಗೃಹ ಸಚಿವ ವಿರುದ್ಧ ಕ್ರಮಕ್ಕೆ  ಆಗ್ರಹ : ರಾಜ್ಯದಲ್ಲಿ ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದು ಹೇಳಿಕೆ ನೀಡಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಶುಕ್ರವಾರ ಒತ್ತಾಯಿಸಿದ್ದಾರೆ. 

ರಾಷ್ಟ್ರದ ಸೇವೆ ಮಾಡಲು ಬಯಸುವವರು ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮಿಶ್ರಾ ಹೇಳಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ತಕ್ಷಣವೇ ಅವರಿಗೆ ನೋಟಿಸ್ ನೀಡಬೇಕು ಎಂದು ಸಿಂಗ್ ಆಗ್ರಹಿಸಿದ್ದಾರೆ.

ಇಂತಹ ಹೇಳಿಕೆಗಳನ್ನು ನೀಡುವುದು ಮಿಶ್ರಾ ಅವರಿಗೆ ಅಭ್ಯಾಸವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಅವರ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಸಚಿವರು ವರ್ತಿಸುವ ರೀತಿಯನ್ನು ಪರಿಗಣಿಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಲ್ಲ ಎಂದು ಹೇಳಿದರು.

ದತಿಯಾದಲ್ಲಿ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಬಿಜೆಪಿ ಹೊರತುಪಡಿಸಿ ಇತರೆ ಯಾವುದೇ ಪಕ್ಷ ಗೆದ್ದರೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯಲಿದೆ.  ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಲೋಟಸ್‌ ಚಿಹ್ನೆಯ ಬಟನ್ ಒತ್ತಬೇಕು. ಇದು ಗಡಿಯಲ್ಲಿ ಸೇನಾ ಬಲ ಹೆಚ್ಚಲಿಸಲಿದೆ ಎಂದರು.  ಮಿಶ್ರಾ ಅವರು ದತಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಮದ್ಯ ಮಾರಾಟದಲ್ಲಿ ಏರಿಕೆ: ಮಧ್ಯಪ್ರದೇಶದಲ್ಲಿ ಮದ್ಯ ಮಾರಾಟವು ಸೋಮವಾರ ಮತ್ತು ಬುಧವಾರ ಸಂಜೆಯ ನಡುವೆ ಸುಮಾರು 15 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 13 ರಂದು ದೇಶಿಯ ಮದ್ಯ ಹಾಗೂ ಭಾರತದಲ್ಲಿ ತಯಾರದ ವಿದೇಶಿ ಮದ್ಯ (ಐಎಂಎಫ್ಎಲ್) ಸೇರಿದಂತೆ ಎಲ್ಲಾ ರೀತಿಯ ಮದ್ಯ 8,67,282 ಲೀಟರ್ ಮಾರಾಟವಾಗಿದೆ. ನವೆಂಬರ್ 14 ಮತ್ತು 15ರಂದು ಅಂಕಿ ಅಂಶಗಳು 9,17,823 ಮತ್ತು 8,81,550 ಲೀಟರ್ ಮಾರಾಟ ಆಗಿವೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 13, 14 ಮತ್ತು 15ರಂದು ಕ್ರಮವಾಗಿ 7,42,092 ಲೀಟರ್, 7,71,331 ಲೀಟರ್ ಮತ್ತು 7,67,273 ಲೀಟರ್ ಮದ್ಯ ಮಾರಾಟವಾಗಿತ್ತು. ಇದು ಪ್ರತಿವರ್ಷ ಸುಮಾರು 10 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಮಧ್ಯಪ್ರದೇಶದಲ್ಲಿ ಮದ್ಯದಂಗಡಿಗಳನ್ನು  ₹11,700 ಕೋಟಿಗೆ ಹರಾಜು ಮಾಡಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ₹12,800ಕ್ಕೆ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದರು. 

ನವೆಂಬರ್ 12ರಂದು ದೀಪಾವಳಿ ಬಂದಿದ್ದರಿಂದ, ಹಬ್ಬದ ಋತುವಿನ ಕಾರಣ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT