ನವದೆಹಲಿ: ಎನ್‌ಸಿಪಿ ವರಿಷ್ಠ ಶರದ್ ಪವಾರ್ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಭೆ ‘ಹಿಂದೂ ವಿರೋಧಿ ಸಮನ್ವಯ ಸಮಿತಿ ಸಭೆ’ಯಾಗಿತ್ತು ಎಂದು ಬಿಜೆಪಿ ಬುಧವಾರ ಟೀಕಿಸಿದೆ.
ಸನಾತನ ಧರ್ಮ ಕುರಿತು ‘ಇಂಡಿಯಾ’ ಅಂಗಪಕ್ಷಗಳ ನಾಯಕರ ಹೇಳಿಕೆಗಳು, ಮೈತ್ರಿಕೂಟದ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸುವ ಮೂಲಕ ವಾಗ್ದಾಳಿ ನಡೆಸಿದೆ.
‘ಮುಂಬೈನಲ್ಲಿ ನಡೆದ ‘ಇಂಡಿಯಾ’ ದ ಸಮನ್ವಯ ಸಮಿತಿ ಸಭೆಯು ಮೇಲ್ತೋರಿಕೆಗೆ ಸ್ಥಾನಗಳ ಹಂಚಿಕೆ ಕುರಿತು ಚರ್ಚಿಸುವ ಸಭೆಯಾಗಿತ್ತಷ್ಟೆ. ವಾಸ್ತವದಲ್ಲಿ, ಅದು ಹಿಂದೂ ಧರ್ಮವನ್ನು ಹೇಗೆ ನಾಶಪಡಿಸಬೇಕು ಎಂಬುದರ ಕುರಿತು ಮೈತ್ರಿಕೂಟ ನಾಯಕರು ಚರ್ಚಿಸಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದಾರೆ.
‘ಹಿಂದೂ ಧರ್ಮ ಗುರಿಯಾಗಿಸಿ ಬಹು ಹಿಂದಿನಿಂದಲೂ ನಡೆಯುತ್ತಿರುವ ಪಿತೂರಿ ಹಿಂದೆ ಆಂಟೊನಿಯೊ ಮೈನೊ ಇದ್ದಾರೆ’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
‘ರಾಹುಲ್ ಗಾಂಧಿ ಅವರು ಹಿಂದುತ್ವವನ್ನು ನಿಷೇಧಿತ ಇಸ್ಲಾಂ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಸಿದ್ದಾರೆ. ಇಸ್ಲಾಮಿಕ್ ಭಯೋ ತ್ಪಾದನಾ ಸಂಘಟನೆಗಳಿಗಿಂತ ಹಿಂದೂ ಉಗ್ರವಾದ ದೇಶಕ್ಕೆ ದೊಡ್ಡ ಅಪಾಯ ಎಂಬುದಾಗಿಯೂ ಹೇಳಿದ್ದಾರೆ’ ಎಂದು ಹೇಳಿದ್ದಾರೆ.
‘ವಿರೋಧ ಪಕ್ಷಗಳ ಹಲವು ನಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಈ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮಾತನಾಡುತ್ತಿಲ್ಲ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ.
‘ಹಿಂದುತ್ವವನ್ನು ನಾಶಪಡಿಸುವ ಕಾರ್ಯಸೂಚಿಯನ್ನು ‘ಇಂಡಿಯಾ’ ಮೈತ್ರಿಕೂಟ ಹೊಂದಿದೆ’ ಎಂದು ಆರೋಪಿಸಿದ್ದಾರೆ.
‘ಇಂಡಿಯಾ’ದ ನಾಯಕರು ಭ್ರಷ್ಟಾ ಚಾರದ ಆರೋಪ ಎದುರಿಸುತ್ತಿದ್ದು, ಕೆಲವು ಜಾಮೀನಿನ ಮೇಲೆ ಹೊರಗಡೆ ಇದ್ದರೆ, ಮತ್ತೂ ಕೆಲವರು ಜೈಲಿಗೆ ಹೋಗಿದ್ದರು. ಇವರ ಬಗ್ಗೆ ಜನರಿಗೆ ಗೊತ್ತಿದೆ. ಮೈತ್ರಿಕೂಟದ ಹೆಸರು ಬದಲಾವಣೆಯಿಂದ ಯಾವುದೇ ಉಪಯೋಗವಿಲ್ಲ. ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಮಾನಿಸಿದಷ್ಟು ಬೇರೆ ಯಾವ ಪಕ್ಷವೂ ಅವಮಾನಿಸಿಲ್ಲ’ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.