ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಟ್‌ ಮತಗಳಿಕೆಗೆ ಬಿಜೆಪಿ ಮೈತ್ರಿ ತಂತ್ರ

ಕಾಂಗ್ರೆಸ್‌ ಕೈಬಿಟ್ಟ ಆರ್‌ಎಲ್‌ಪಿ ನಾಯಕ ಹನುಮಾನ್‌ ಬೇನಿವಾಲ್‌
Last Updated 4 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ (ಆರ್‌ಎಲ್‌ಪಿ) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹನುಮಾನ್‌ ಬೇನಿವಾಲ್‌ ಅವರ ಈ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದರಿಂದ ಜಾಟ್‌ ಸಮುದಾಯದ ಮತವನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಇದೆ.

ಬೇನಿವಾಲ್‌ ಅವರ ಬೆಂಬಲ ಪಡೆದುಕೊಳ್ಳಲು ಕಾಂಗ್ರೆಸ್‌ ಪಕ್ಷ ಬಹಳ ಪ್ರಯತ್ನ ನಡೆಸಿತ್ತು. ಆದರೆ, ಅದು ಫಲಕಾರಿಯಾಗಲಿಲ್ಲ. ಬೇನಿವಾಲ್‌ ಅವರು ಬಿಜೆಪಿ ಜತೆಗೆ ಕೈಜೋಡಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ.

ಬೇನಿವಾಲ್‌ ಅವರು ನಾಗೌರ್‌ ಜಿಲ್ಲೆಯ ಖಿನ್ವ್‌ಸರ್‌ನ ಶಾಸಕ. ಅವರು ನಾಗೌರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಂಸದೆಜ್ಯೋತಿ ಮಿರ್ಧಾ ಅವರು ಇಲ್ಲಿ ಕಾಂಗ್ರೆಸ್‌ನ ಹುರಿಯಾಳು.

ರಾಜಸ್ಥಾನ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅವರನ್ನು ಗುರುವಾರ ಬೆಳಿಗ್ಗೆ ಬೇನಿವಾಲ್‌ ಭೇಟಿಯಾಗಿ ಚರ್ಚಿಸಿದರು. ಬಳಿಕ, ಮೈತ್ರಿಯ ಘೋಷಣೆ ಮಾಡಲಾಯಿತು.

ರಾಜಸ್ಥಾನದ 25 ಕ್ಷೇತ್ರಗಳ ಪೈಕಿ ಒಂದು ಸ್ಥಾನವನ್ನು ಆರ್‌ಎಲ್‌ಪಿಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಉಳಿದೆಡೆ ಬಿಜೆಪಿ ಸ್ಪರ್ಧಿಸಲಿದೆ. ಬೇನಿವಾಲ್‌ ಅವರು ಬಿಜೆಪಿ ಪರವಾಗಿ ದೇಶದ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಜ್ಯೋತಿ ಅವರೂ ಜಾಟ್‌ ಸಮುದಾಯದ ಪ್ರಮುಖ ನಾಯಕಿ. 2009ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅವರು ಭಾರಿ ಅಂತರದಿಂದ ಗೆದ್ದಿದ್ದರು. 2014ರಲ್ಲಿ ಮಾತ್ರ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದ್ದರು. ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಅವರನ್ನು ವಾರದ ಹಿಂದೆ ಬೇನಿವಾಲ್‌ ಭೇಟಿಯಾಗಿದ್ದರು. ಆದರೆ, ಯಾವುದೇ ಒಪ್ಪಂದಕ್ಕೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ ಪಕ್ಷದ ಜತೆಗೆ ಚೌಕಾಶಿ ಮಾಡಿದ್ದ ಬೇನಿವಾಲ್‌ ಏಳು ಕ್ಷೇತ್ರಗಳಿಗೆ ಬೇಡಿಕೆ ಇರಿಸಿದ್ದರು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT