ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ

Published 29 ಫೆಬ್ರುವರಿ 2024, 16:06 IST
Last Updated 29 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಮುಂಬರುವ ಲೋಕಸಭೆ ಚುನಾವಣೆಗೆ ಸಿಪಿಎಂ ಮತ್ತು ಸಿಪಿಐಗೆ ತಲಾ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಕಾಂಗ್ರೆಸ್‌ ಜತೆಗಿನ ಮಾತುಕತೆ ಪ್ರಗತಿಯಲ್ಲಿರುವಂತೆಯೇ ಈ ಹೆಜ್ಜೆಯಿಟ್ಟಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಸಿಪಿಎಂ ಮತ್ತು ಸಿಪಿಐನ ರಾಜ್ಯ ಕಾರ್ಯದರ್ಶಿಗಳಾದ ಕೆ. ಬಾಲಕೃಷ್ಣನ್ ಹಾಗೂ ಆರ್. ಮುತ್ತರಸನ್ ಜತೆಗಿನ ಮಾತುಕತೆಯಲ್ಲಿ ಸೀಟು ಹಂಚಿಕೆ ಸಂಬಂಧ ಒಮ್ಮತಕ್ಕೆ ಬಂದರು. 

2019ರ ಚುನಾವಣೆಯಲ್ಲೂ ಎಡಪಕ್ಷಗಳು ತಲಾ ಎರಡು ಸ್ಥಾನಗಳನ್ನು ಪಡೆದಿದ್ದು, ಅವುಗಳನ್ನು ಗೆದ್ದುಕೊಂಡಿದ್ದವು. ಮದುರೈ ಮತ್ತು ಕೊಯಮತ್ತೂರು ಕ್ಷೇತ್ರಗಳಲ್ಲಿ ಸಿಪಿಎಂ, ತಿರುಪ್ಪೂರ್ ಮತ್ತು ನಾಗಪಟ್ಟಿಣಂ (ಎಸ್‌ಸಿ) ಕ್ಷೇತ್ರಗಳಲ್ಲಿ ಸಿಪಿಐ ಸಂಸದರಿದ್ದಾರೆ. 

ಕಾಂಗ್ರೆಸ್‌ ಅಸಮಾಧಾನ: ಎಡಪಕ್ಷಗಳೊಂದಿಗಿನ ಮಾತುಕತೆ ಸುಗಮವಾಗಿ ನಡೆದರೂ, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ಜತೆ ಒಮ್ಮತಕ್ಕೆ ಬರಲು ಡಿಎಂಕೆಗೆ ಸಾಧ್ಯವಾಗಿಲ್ಲ. ಏಳು ಸ್ಥಾನಗಳನ್ನು ನೀಡುವ ಡಿಎಂಕೆ ಪ್ರಸ್ತಾವದಿಂದ ಕಾಂಗ್ರೆಸ್‌ ಅಸಮಾಧಾನಗೊಂಡಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಕನಿಷ್ಠ ಒಂಬತ್ತು ಸ್ಥಾನಗಳು ಮತ್ತು ಪುದುಚೇರಿಯಲ್ಲಿ ಒಂದು ಸ್ಥಾನಕ್ಕೆ ಕಾಂಗ್ರೆಸ್‌ ಬೇಡಿಕೆಯಿಟ್ಟಿದೆ.

ಎರಡನೇ ಸುತ್ತಿನ ಮಾತುಕತೆಗಾಗಿ ಉಭಯ ಪಕ್ಷಗಳ ಪ್ರತಿನಿಧಿಗಳು ಶನಿವಾರ ಮತ್ತೆ ಸಭೆ ಸೇರುವ ನಿರೀಕ್ಷೆ ಇದೆ. ಸೀಟು ಹಂಚಿಕೆಯ ಮಾತುಕತೆಯನ್ನು ಶೀಘ್ರ ಮುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾಂಗ್ರೆಸ್ಅನ್ನು ಒಳಗೊಂಡಿರುವ ಡಿಎಂಕೆ ನೇತೃತ್ವದ ಮೈತ್ರಿಕೂಟವು ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 39 ಸ್ಥಾನಗಳಲ್ಲಿ 38ನ್ನು ಗೆದ್ದುಕೊಂಡಿತ್ತು. ಅಲ್ಲದೆ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಏಕೈಕ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT