ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ಜಿಗಿದ, ಮತ್ತೊಬ್ಬ ನೇತಾಡುತ್ತಿದ್ದ.: ಲೋಕಸಭೆಯಲ್ಲಿದ್ದ ಸಂಸದರು ಹೇಳಿದ್ದು..

Published 13 ಡಿಸೆಂಬರ್ 2023, 13:03 IST
Last Updated 13 ಡಿಸೆಂಬರ್ 2023, 13:03 IST
ಅಕ್ಷರ ಗಾತ್ರ

ನವದೆಹಲಿ: 2001ರ ಸಂಸತ್ ದಾಳಿಗೆ 22 ವರ್ಷವಾಗಿದ್ದು, ಅದೇ ದಿನ ಲೋಕಸಭೆಗೆ ಆಗಂತುಕರು ಪ್ರವೇಶಿಸಿದ್ದಾರೆ. ಲೋಕಸಭೆಯ ಕಲಾಪ ನಡೆಯುತ್ತಿದ್ದಾಗ ವೀಕ್ಷಕರ ಗ್ಯಾಲರಿಯಿಂದ ಧುಮುಕಿದ ಇಬ್ಬರು, ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದಾರೆ. ಬಳಿಕ, ಸಂಸದರು ಅವರನ್ನು ಹಿಡಿದಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಹೊರಗಡೆ ಮತ್ತಿಬ್ಬರು, ಬಣ್ಣದ ಹೊಗೆ ಸಿಂಪಡಿಸಿ, ಸರ್ವಾಧಿಕಾರ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಈ ಎರಡೂ ಪ್ರಹಸನಗಳಲ್ಲಿ ಭಾಗಿಯಾದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಚೇಂಬರ್‌ಗೆ ಹಾರಿದ್ದಾರೆ. ಒಬ್ಬನು ಮೇಜುಗಳ ಮೇಲೆ ಜಿಗಿದರೆ, ಇನ್ನೊಬ್ಬ ಗ್ಯಾಲರಿಯಿಂದ ನೇತಾಡುತ್ತಿದ್ದ. ಬಳಿಕ ಆತನೂ ಮೇಜಿನ ಮೇಲೆ ಜಿಗಿದ ಎಂದು ಸದನದಲ್ಲಿದ್ದ ಸಂಸದರು ಹೇಳಿದ್ದಾರೆ.

ಲೋಕಸಭೆಗೆ ಪ್ರವೇಶಿಸಿದ ಆಗಂತುಕರಲ್ಲಿ ಒಬ್ಬ ನಾನು ದೇಶ ಪ್ರೇಮಿ, ಪ್ರತಿಭಟನೆ ಮಾಡಲು ಬಂದಿದ್ದೇನೆ ಎಂದು ಹೇಳಿರುವುದಾಗಿ ಸಂಸದರು ಹೇಳಿದ್ದಾರೆ. ಇಬ್ಬರನ್ನೂ ಥಳಿಸಿದ ಸಂಸದರು ಬಳಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಲೋಕಸಭೆಗೆ ಪ್ರವೇಶಿಸಿದ ಆಗಂತುಕರು ಶೂನಲ್ಲಿ ಗ್ಯಾಸ್ ಕ್ಯಾನ್‌ಗಳನ್ನು ಅಡಗಿಸಿಟ್ಟುಕೊಂಡಿದ್ದರು. ಅದರಿಂದ ಹಳದಿ ಬಣ್ಣದ ಹೊಗೆ ಸಿಂಪಡಿಸಿದರು ಎಂದು ಜೆಡಿಯು ಸಂಸದ ರಾಮಪ್ರೀತ್‌ ಮಂಡಲ್ ಹೇಳಿದ್ದಾರೆ.

‘ಇಬ್ಬರಲ್ಲಿ ಒಬ್ಬ ಆಗಂತುಕ ’ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದ್ದಾನೆ‘ ಎಂದು ಮಂಡಲ್ ಹೇಳಿದ್ದಾರೆ.

‘ಸದನದಲ್ಲಿ ಇದ್ದಕ್ಕಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಒಬ್ಬ ವ್ಯಕ್ತಿ ಒಂದು ಬೆಂಚ್‌ನಿಂದ ಮತ್ತೊಂದಕ್ಕೆ ಹಾರುತ್ತಿದ್ದದ್ದನ್ನು ಗಮನಿಸಿದೆವು. ಅದು ಅತ್ಯಂತ ಗಾಬರಿಯ ವಾತಾವರಣವಾಗಿತ್ತು. ಏನು ಬೇಕಾದರೂ ಆಗಬಹುದಿತ್ತು. ಒಂದು ಪಕ್ಷ ಅವನು ತನ್ನ ಪಾಕೆಟ್‌ನಲ್ಲಿ ಬಾಂಬ್ ಅಥವಾ ಬೆಂಕಿ ಹಚ್ಚುವ ಸಾಧನಗಳನ್ನು ಇಟ್ಟುಕೊಂಡಿದ್ದರೆ ಏನು ಗತಿ? ಇದೊಂದು ಗಂಭೀರ ಭದ್ರತಾ ಲೋಪ‘ ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಸುದೀಪ್ ಬಂದೋಪಾಧ್ಯಾಯ ಹೇಳಿದ್ದಾರೆ.

‘ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಧುಮುಕಿದರು. ಆ ಸಂದರ್ಭ ಅವರು ಹೊಗೆ ಸಿಂಪಡಿಸಿದರು. ಎಲ್ಲರೂ ಓಡಲು ಆರಂಭಿಸಿದರು. ಆಗಂತುಕರನ್ನು ಕೆಲ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಹಿಡಿದರು. ಅವರಲ್ಲಿ ಒಬ್ಬ ಸಾಗರ್ ಎಂಬಾತ ಸಂಸದ ಪ್ರತಾಪ್ ಸಿಂಹ ಪಾಸ್ ಮೇಲೆ ಪ್ರವೇಶ ಪಡೆದಿದ್ದ’ ಎಂದು ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.

ಇದೊಂದು ದೊಡ್ಡ ಭದ್ರತಾ ಲೋಪ, ಸಂಸತ್ ಭವನದ ಮೇಲಿನ ದಾಳಿ ನಡೆದ ದಿನವೇ ಈ ಲೋಪ ಆಗಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

‘ಸದನಕ್ಕೆ ನುಗ್ಗಿದ ಇಬ್ಬರು ವ್ಯಕ್ತಿಗಳು ಎರಡು ಡಬ್ಬಿಗಳಿಂದ ಹಳದಿ ಬಣ್ಣದ ಹೊಗೆಯನ್ನು ಸಿಂಪಡಿಸಿದರು. ಹೊಗೆ ವಿಷಕಾರಿಯಾಗಿರಬಹುದು. ಇದು ಗಂಭೀರ ಭದ್ರತಾ ಲೋಪವಾಗಿದೆ’ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕಿಡಿಕಾರಿದ್ದಾರೆ.

‘ಆಗಂತುಕರು ಹೊಗೆ ಸಿಂಪಡಿಸುತ್ತಾ ಸದನದ ಬಾವಿಯತ್ತ ನುಗ್ಗಲು ಮುಂದಾದರು. ಲೋಕಸಭೆ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ’ಎಂದು ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ. ಮೊದಲಿಗೆ, ಒಬ್ಬ ವ್ಯಕ್ತಿ ಅಚಾನಕ್ ಆಗಿ ಬಿದ್ದಿರಬಹುದು ಎಂದು ನಾವು ಭಾವಿಸಿದೆವು. ಆದರೆ, ಎರಡನೇ ವ್ಯಕ್ತಿ ಕೆಳಗೆ ಜಂಪ್ ಮಾಡಿದಾಗ ನಾವು ಜಾಗರೂಕರಾದೆವು’ಎಂದು ಬಿಜೆಪಿ ಸಂಸದ ರಾಜೇಂದ್ರ ಅಗರವಾಲ್ ಹೇಳಿದರು.

‘ಗೃಹ ಸಚಿವ ಅಮಿತ್ ಶಾ ಅವರು ದೊಡ್ಡದಾಗಿ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ, ಸಂಸತ್ತಿನಲ್ಲಿ ಭದ್ರತೆಯನ್ನು ಕಾಪಾಡಲು ಅವರಿಗೆ ಸಾಧ್ಯವಾಗಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು’ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಇಬ್ಬರು ಯುವಕರು ಲೋಕಸಭೆಯ ಗ್ಯಾಲರಿಯಿಂದ ಧುಮುಕಿದರು. ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದರು. ಅದು ದುರ್ವಾಸನೆ ಬೀರುತ್ತಿತ್ತು. ಸಂಸದರು ಅವರನ್ನು ಹಿಡಿಯಲು ಧಾವಿಸಿದರು. ಒಬ್ಬ ವ್ಯಕ್ತಿ ಕೆಲವು ಘೋಷಣೆಗಳನ್ನು ಕೂಗಿದ. ಇದು ಹೊಸ ಸಂಸತ್ ಭವನದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT