ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಸಣ್ಣ ಪಕ್ಷಗಳ ಸ್ವತಂತ್ರ ಸ್ಪರ್ಧೆ– ಲಾಭ ಯಾರಿಗೆ?

Published 7 ಏಪ್ರಿಲ್ 2024, 0:25 IST
Last Updated 7 ಏಪ್ರಿಲ್ 2024, 0:25 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟ ನಡುವೆಯೇ ನೇರ ‍ಪೈಪೋಟಿ ಇದೆ. ಕೆಲವೊಂದು ಪ್ರಾದೇಶಿಕ ಪಕ್ಷಗಳು ಎರಡೂ ಮೈತ್ರಿಯಿಂದ ಅಂತರ ಕಾಯ್ದುಕೊಂಡು ಕಣದಲ್ಲಿವೆ. ಇದರ ನಡುವೆ, ಸಣ್ಣ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಈ ಪಕ್ಷಗಳನ್ನು ಬಿಜೆಪಿಯ ‘ಬಿ ಟೀಮ್‌’ ಎಂದು ವಿಪಕ್ಷಗಳು ಜರಿಯುವುದುಂಟು. ಈ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಕೆಲವೊಂದು ಕಡೆಗಳಲ್ಲಿ ಫಲಿತಾಂಶವನ್ನು ಏರುಪೇರು ಮಾಡುವ ಸಾಮರ್ಥ್ಯ ಹೊಂದಿವೆ. ಇಂತಹ ಪಕ್ಷಗಳ ಸ್ವತಂತ್ರ ಸ್ಪರ್ಧೆಯಿಂದ ಲಾಭ ಯಾರಿಗೆ? 

ಉತ್ತರ ಪ್ರದೇಶ: ಹೊಸ ಮೈತ್ರಿಕೂಟದ ಹೊಡೆತ ಯಾರಿಗೆ? 

ಉತ್ತರ ಪ್ರದೇಶದ ಕಣದಲ್ಲಿ ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಎರಡೂ ಮೈತ್ರಿಗಳಿಗೆ ಸವಾಲು ಒಡ್ಡುವ ವಿಶ್ವಾಸದಲ್ಲಿ ಬಿಎಸ್‌ಪಿ ಇದೆ. ಇದರ ನಡುವೆಯೇ, ರಾಜ್ಯದಲ್ಲಿ ಹೊಸ ಮೈತ್ರಿಕೂಟವೊಂದು ರಚನೆಯಾಗಿದೆ. ಈ ಮೈತ್ರಿಕೂಟವು ‘ಇಂಡಿಯಾ’ ಮೈತ್ರಿಕೂಟದ ಮತಗಳನ್ನು ಕಸಿಯುವ ಸಂಭವ ಇದೆ. 

ನೂತನ ಮೈತ್ರಿಕೂಟದಲ್ಲಿ ಇರುವ ಪಕ್ಷಗಳು ಎಐಎಂಐಎಂ, ಅಪ್ನಾ ದಳ್ (ಕಾಮೇರವಾಡಿ), ರಾಷ್ಟ್ರೀಯ ಉದಯ್ ಪಾರ್ಟಿ ಹಾಗೂ ಪ್ರಗತಿಶೀಲ ಮಾನವ್‌ ಸಮಾಜ್‌ ಪಾರ್ಟಿ. ಮೈತ್ರಿಕೂಟದ ಹೆಸರು ‘ಪಿಡಿಎಂ ನ್ಯಾಯ್‌ ಮೋರ್ಚಾ’. ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವುದಾಗಿ ಮೈತ್ರಿಕೂಟದ ನಾಯಕರು ಹೇಳಿಕೊಂಡಿದ್ದಾರೆ.

ಸಮಾಜವಾದಿ ಪಕ್ಷವು (ಎಸ್‌ಪಿ) ದಲಿತ-ಹಿಂದುಳಿದ ಹಾಗೂ ಮುಸ್ಲಿಂ ಮತಗಳ ಸಮೀಕರಣವನ್ನು ನೆಚ್ಚಿಕೊಂಡಿದೆ. ಈ ಸಮೀಕರಣದ ಬಲದಿಂದಲೇ ಪಕ್ಷವು ರಾಜ್ಯದಲ್ಲಿ ಈ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಹಲವು ಕ್ಷೇತ್ರಗಳಲ್ಲಿ ಎಸ್‌ಪಿ ಗೆಲುವಿಗೆ ಅಡ್ಡಗಾಲು ಹಾಕಿತ್ತು. ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದ್ದ ಸಮಾಜವಾದಿ ಪಕ್ಷವು ಗಳಿಸಿದ್ದು 112 ಸ್ಥಾನಗಳನ್ನಷ್ಟೇ. ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು 500, 1000 ಮತಗಳ ಅಂತರದಿಂದ ಪರಾಜಯ ಅನುಭವಿಸಿದ್ದರು. 

ವಂಚಿತ್‌ ‘ಮಹಾ’ ಪ್ರಭಾವವೇನು? 

ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ‘ವಂಚಿತ್‌ ಬಹುಜನ ಅಘಾಡಿ (ವಿಬಿಎ)’ ಜತೆಗೆ ಮೈತ್ರಿ ಮಾಡಿಕೊಳ್ಳಲು ‘ಮಹಾವಿಕಾಸ ಅಘಾಡಿ (ಎಂವಿಎ)’ ಒಲವು ತೋರಿತ್ತು. ಈ ಸಂಬಂಧ ಮಾತುಕತೆಗಳು ನಡೆದಿದ್ದವು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 40 ಸೀಟುಗಳನ್ನು ನೀಡಬೇಕು ಎಂದು ಪ್ರಕಾಶ್ ಅಂಬೇಡ್ಕರ್ ಪಟ್ಟು ಹಿಡಿದರು. ಇದಕ್ಕೆ ಎಂವಿಎ ಒಪ್ಪಿರಲಿಲ್ಲ. ಅದರ ನಡುವೆಯೇ, ಪ್ರಕಾಶ್ ಅವರು ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಅಕೋಲಾ ಕ್ಷೇತ್ರದಲ್ಲಿ ಪ್ರಕಾಶ್ ಅವರು ಅಖಾಡದಲ್ಲಿದ್ದಾರೆ. 

ವಿಬಿಎ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿರುವುದಿಂದ ಬಿಜೆಪಿಗೆ ಅನುಕೂಲವಾಗಲಿದೆ. ಎಂವಿಎ ಮೈತ್ರಿಕೂಟದ ಒಂದಷ್ಟು ಮತಗಳನ್ನು ವಿಬಿಎ ಸೆಳೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ವಿಬಿಎ ಹಾಗೂ ಎಐಎಂಐಎಂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದವು. ಈ ಮೈತ್ರಿಕೂಟವು ಒಂದು ಕ್ಷೇತ್ರದಲ್ಲಿ ಜಯ ಗಳಿಸಿತ್ತು. ಶೇ 7.65ರಷ್ಟು ಮತಗಳನ್ನು ಪಡೆದಿತ್ತು. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 

ಚುನಾವಣೆಗೆ ಮುನ್ನ ‘ಜನನಾಯಕ’ ದೂರ 

ಹರಿಯಾಣದಲ್ಲಿ ನಾಲ್ಕೂವರೆ ವರ್ಷಗಳಿಂದ ಬಿಜೆಪಿ–ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಕ್ಕೆ ಮುನ್ನ ಎರಡೂ ಪಕ್ಷಗಳ ಮೈತ್ರಿ ಮುರಿದು ಬಿದ್ದಿದೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿವಾದವೇ ಇದಕ್ಕೆ ಕಾರಣ ಎಂದು ಉಭಯ ಪಕ್ಷಗಳ ನಾಯಕರು ಹೇಳುವರು. ತೆರೆ ಮರೆಯಲ್ಲಿ ‘ಹೊಂದಾಣಿಕೆ’ ಮಾಡಿಕೊಂಡೇ ಈ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗೆ ಅಣಿಯಾಗಿವೆ.

ಹರಿಯಾಣದಲ್ಲಿ ಜಾಟರು ಶೇ 20ರಷ್ಟಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರಲ್ಲಿ ಜಾಟರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಜಾಟರು ಜೆಜೆಪಿಯ ಪ್ರಧಾನ ಮತ ಬ್ಯಾಂಕ್‌ ಹೌದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಜೆಪಿ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ 5ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿ ಎಲ್ಲ 10 ಕ್ಷೇತ್ರಗಳನ್ನೂ ಗೆದ್ದುಕೊಂಡಿತ್ತು. ಈ ಸಲ ಬಿಜೆಪಿ–ಜೆಜೆಪಿ ಜತೆಗೂಡಿ ಸ್ಪರ್ಧಿಸಿದರೆ ಜಾಟರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಡೆಗೆ ವಾಲಬಹುದು. ಇದರಿಂದ, ಮೈತ್ರಿಕೂಟಕ್ಕೆ ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರವೇ ಉಭಯ ಪಕ್ಷಗಳು ದೂರವಾಗಲು ಕಾರಣ. ಕಾಂಗ್ರೆಸ್‌ ಜಾಟರು ಹಾಗೂ ರೈತರ ಮತಗಳನ್ನು ನೆಚ್ಚಿಕೊಂಡಿದೆ. ಜಾಟರ ಮತಗಳು ಜೆಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಿಭಜನೆಯಾದರೆ ತಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಕಮಲ ಪಾಳಯದ ನಾಯಕರ ಲೆಕ್ಕಾಚಾರ.

ಕಾಂಗ್ರೆಸ್‌ ಎಚ್ಚರಿಕೆ ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮತಗಳನ್ನು ನೆಚ್ಚಿಕೊಂಡು ಬಿಎಸ್‌ಪಿ, ಆಜಾದ್‌ ಸಮಾಜ್ ಪಾರ್ಟಿ (ಎಎಸ್‌ಪಿ), ಸಿಪಿಎಂ, ಆರ್‌ಎಲ್‌ಪಿ, ಭಾರತೀಯ ಆದಿವಾಸಿ ಪಕ್ಷಗಳು (ಬಿಎಪಿ) ಚುನಾವಣಾ ಕಣಕ್ಕೆ ಇಳಿದಿದ್ದವು. ಈ ಪಕ್ಷಗಳನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಕಡೆಗಣಿಸಿದ್ದವು. ಈ ಪಕ್ಷಗಳು ಒಟ್ಟು ಏಳು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಕನಿಷ್ಠ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವನ್ನು ತಡೆದಿದ್ದವು. ಹೊಡೆತದಿಂದ ಪಾಠ ಕಲಿತಿರುವ ಕಾಂಗ್ರೆಸ್‌ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಆರ್‌ಎಲ್‌ಪಿ ಹಾಗೂ ಸಿಪಿಎಂಗೆ ಸೀಟುಗಳನ್ನು ಬಿಟ್ಟುಕೊಟ್ಟಿದೆ. ಆರ್‌ಎಲ್‌ಪಿ ಮುಖ್ಯಸ್ಥ ಹನುಮಾನ್ ಬೆನಿವಾಲ್‌ ಅವರು ನಾಗೌರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಮೈತ್ರಿಯಿಂದ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ ನಾಯಕರು ಭಾವಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT