ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Poll | ಕೇರಳದಲ್ಲಿ ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಸ್ಪರ್ಧೆ; ಇತರರಿಗೆ 4 ಸ್ಥಾನ

Published 28 ಫೆಬ್ರುವರಿ 2024, 9:44 IST
Last Updated 28 ಫೆಬ್ರುವರಿ 2024, 9:44 IST
ಅಕ್ಷರ ಗಾತ್ರ

ತಿರುವನಂತಪುರ: ಮುಂಬರುವ ಲೋಕಸಭಾ ಚುನಾವಣೆಗೆ ಕೇರಳದಲ್ಲಿ ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ (ಯುಡಿಎಫ್) ಸೀಟು ಹಂಚಿಕೆ ಅಂತಿಮವಾಗಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಅಭ್ಯರ್ಥಿಗಳ ಪಟ್ಟಿಯು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಅವರ ಹೆಸರು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

ಕೇರಳದ 20 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಈ ಹಿಂದಿನಂತೆ, ಐಯುಎಂಎಲ್ ಪಕ್ಷವು ಈ ಬಾರಿಯೂ ಮಲಪ್ಪುರಂ ಮತ್ತು ಪೊನ್ನಾನಿ ಈ ಎರಡು ಕ್ಷೇತ್ರಗಳಲ್ಲಿ, ಕೊಲ್ಲಂನಲ್ಲಿ ಆರ್‌ಎಸ್‌ಪಿ ಮತ್ತು ಕೊಟ್ಟಾಯಂನಲ್ಲಿ ಕೇರಳ ಕಾಂಗ್ರೆಸ್ (ಜೋಸೆಫ್‌) ಸ್ಪರ್ಧಿಸಲಿವೆ.

ತನ್ನ ಎರಡನೇ ಅತಿದೊಡ್ಡ ಸಮ್ಮಿಶ್ರ ಪಾಲುದಾರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ (ಐಯುಎಂಎಲ್) ಈ ಬಾರಿ ಮತ್ತೊಂದು ಹೆಚ್ಚುವರಿ ಲೋಕಸಭಾ ಸ್ಥಾನ ಬಿಟ್ಟುಕೊಡಲು ಇರುವ ವಾಸ್ತವಾಂಶದ ಬಗ್ಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ಕೇರಳದಲ್ಲಿ ಸೀಟು ಹಂಚಿಕೆ ಅಂತಿಮವಾಗಿರುವುದನ್ನು ಯುಡಿಎಫ್‌ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಕೂಡ ಮಾಡಿದರು.

ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕೆಪಿಸಿಸಿ ಮುಖ್ಯಸ್ಥರು ಮತ್ತು ವಿಪಕ್ಷ ನಾಯಕರು ಶೀಘ್ರದಲ್ಲೇ ನವದೆಹಲಿಗೆ ತೆರಳಲಿದ್ದಾರೆ. ಅಭ್ಯರ್ಥಿಗಳ ಘೋಷಣೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮಾಡಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಐಯುಎಂಎಲ್‌ಗೆ ರಾಜ್ಯಸಭೆ ಸ್ಥಾನ ಕೊಟ್ಟ ಕಾಂಗ್ರೆಸ್‌: 

ಹೆಚ್ಚುವರಿ ಲೋಕಸಭಾ ಸ್ಥಾನದ ಬದಲಿಗೆ ಹೆಚ್ಚುವರಿ ರಾಜ್ಯಸಭಾ ಸ್ಥಾನ ನೀಡುವ ಕಾಂಗ್ರೆಸ್‌ನ ಪ್ರಸ್ತಾಪವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಪ್ಪಿಕೊಳ್ಳುವ ಮೂಲಕ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೊಂಡಿದೆ.

ರಾಜ್ಯಸಭೆಯಲ್ಲಿ ತೆರವಾಗುವ ಸ್ಥಾನ ಸರದಿ ಮೇಲೆ ಹಂಚಿಕೆಯಾಗಲಿದ್ದು, ಸದ್ಯವೇ ತೆರವಾಗಲಿರುವ ಸ್ಥಾನವನ್ನು ಐಯುಎಂಎಲ್‌ಗೆ ನೀಡಲಾಗುವುದು. ನಂತರದಲ್ಲಿ ತೆರವಾಗಲಿರುವ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ. ಇಬ್ಬರು ರಾಜ್ಯಸಭಾ ಸದಸ್ಯರನ್ನು ಐಯುಎಂಎಲ್‌ ಹೊಂದಲಿದೆ ಎಂದು ವಿ.ಡಿ. ಸತೀಶನ್‌ ಹೇಳಿದ್ದಾರೆ.

ಸದ್ಯ ಕೇರಳದಿಂದ ಇಬ್ಬರು ಲೋಕಸಭಾ ಸದಸ್ಯರನ್ನು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಐಯುಎಂಎಲ್ ಹೊಂದಿದೆ. ಈ ಬಾರಿ ಹೆಚ್ಚುವರಿ ಲೋಕಸಭಾ ಸ್ಥಾನಕ್ಕೆ ಅದು ಬೇಡಿಕೆ ಇಟ್ಟಿತ್ತು. ಕೇರಳದಲ್ಲಿ ಕಾಂಗ್ರೆಸ್‌ನ ಎರಡನೇ ಅತಿದೊಡ್ಡ ಸಮ್ಮಿಶ್ರ ಪಾಲುದಾರರಾಗಿರುವ ಐಯುಎಂಎಲ್, ವಯನಾಡ್‌ನಂತಹ ಹಲವು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದೆ. ವಯನಾಡ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ಬಾರಿಗೆ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ಒಂದು ರಾಜ್ಯಸಭಾ ಸ್ಥಾನವನ್ನು ಐಯುಎಂಎಲ್‌ಗೆ ಬಿಟ್ಟುಕೊಟ್ಟಿದೆ ಎಂದೇ ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿಯವರ ಜತೆಗೆ ಕೇರಳದ ಕಾಂಗ್ರೆಸ್‌ ಹಾಲಿ ಸಂಸದರೆಲ್ಲರೂ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. 

ರಾಹುಲ್‌ ಸ್ಪರ್ಧೆಗೆ ಒತ್ತಾಯ : ವಯನಾಡ್‌ ಕ್ಷೇತ್ರದಿಂದಲೇ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕೇರಳ ಕಾಂಗ್ರೆಸ್‌ ಬುಧವಾರ ಒತ್ತಾಯಿಸಿದೆ. 

ಐಯುಎಂಎಲ್‌ನ ಹಾಲಿ ಸಂಸದರ ಸ್ಪರ್ಧೆ

ಮಲಪ್ಪುರಂ (ಕೇರಳ) (ಪಿಟಿಐ): ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಇಬ್ಬರು ಹಾಲಿ ಸಂಸದರನ್ನು ಅಭ್ಯರ್ಥಿಗಳಾಗಿ ಬುಧವಾರ ಪ್ರಕಟಿಸಿದೆ.

ಹಾಲಿ ಸಂಸದರಾದ ಇ.ಟಿ ಮುಹಮದ್‌ ಬಷೀರ್‌ ಅವರು ಮಲಪ್ಪುರಂ ಮತ್ತು ಅಬ್ದುಲ್‌ ಸಮದ್‌ ಸಮದಾನಿ ಅವರು ಪೊನ್ನಾನಿ ಕ್ಷೇತ್ರದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ, ಪಕ್ಕದ ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಐಯುಎಂಎಲ್‌ ವರಿಷ್ಠ ಪಾಲಕ್ಕಾಡ್‌ ಸಾದಿಖ್‌ ಅಲಿ ಷಿಹಾಬ್‌ ತಂಗಳ್‌ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT