ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಲ್ಲಿ ರಕ್ಷಣೆಗೆ ಹೋದ ಸಚಿವ; ಅವರನ್ನು ಉಳಿಸಲು ಧಾವಿಸಿದ ವಾಯುಪಡೆ!

ಮಧ್ಯ ಪ್ರದೇಶ ಪ್ರವಾಹ
Last Updated 5 ಆಗಸ್ಟ್ 2021, 3:32 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶದ ಹಲವೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನರ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಸಚಿವರೊಬ್ಬರು ನೀರಿನ ಮಧ್ಯೆ ಸಿಲುಕಿದ ಘಟನೆ ನಡೆದಿದೆ. ಏರ್‌ಲಿಫ್ಟ್‌ ಮಾಡುವ ಮೂಲಕ ಅವರನ್ನು ರಕ್ಷಿಸಲಾಗಿದೆ.

ಪ್ರವಾಹ ಪೀಡಿತ ದತಿಯಾ ಜಿಲ್ಲೆಯಲ್ಲಿ ಮನೆಯ ಸುತ್ತಲೂ ನೀರು ಆವರಿಸಿಕೊಂಡು, ಮಹಡಿಯ ಮೇಲೆ ರಕ್ಷಣೆಗಾಗಿ ಒಂಬತ್ತು ಜನರು ಕಾಯುತ್ತಿದ್ದರು. ಛಾವಣಿ ಹೊರತುಪಡಿಸಿ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿತ್ತು. ಅದೇ ಸಮಯದಲ್ಲಿ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಬೋಟ್‌ನಲ್ಲಿ ಪ್ರವಾಹದ ಸಮೀಕ್ಷೆ ನಡೆಸುತ್ತಿದ್ದರು. ವೇಗವಾಗಿ ಬೀಸುವ ಗಾಳಿ ಮತ್ತು ರಭಸವಾಗಿ ಹರಿಯುವ ನೀರಿನ ಮಧ್ಯೆಯೂ ಆ ಹಡಗು ಸಂತ್ರಸ್ತರ ಸಮೀಪಕ್ಕೆ ತಲುಪಿತ್ತು.

ಅದೇ ಕ್ಷೇತ್ರದ ಶಾಸಕರೂ ಆಗಿರುವ ಮಿಶ್ರಾ, ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ವ್ಯವಸ್ಥೆ ಕೈಗೊಳ್ಳುವ ಮುನ್ನವೇ ಸ್ವತಃ ಅವರೇ ಪ್ರಣಾಪಾಯಕ್ಕೆ ಸಿಲುಕಿದ ಪರಿಸ್ಥಿತಿ ಎದುರಾಯಿತು. ಅವರು ತೆರಳಿದ್ದ ಬೋಟ್‌ ಮೇಲೆ ಮರವೊಂದು ಉರುಳಿ ಬಿದ್ದಿತ್ತು ಹಾಗೂ ಬೋಟ್‌ನ ಮೋಟಾರ್‌ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ತಕ್ಷಣವೇ ಮಿಶ್ರಾ ಅವರು ಸರ್ಕಾರದ ಅಧಿಕಾರಿಗಳಿಗೆ ಸಂದೇಶ ರವಾನಿಸಿದರು. ಕೆಲವು ಸಮಯದಲ್ಲೇ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ನೆರವಿಗೆ ಬಂದು, ಸಚಿವ ಮ್ರಿಶಾ ಮತ್ತು ಒಂಬತ್ತು ಜನ ಸಂತ್ರಸ್ತರ ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪ್ರವಾಹದಲ್ಲಿ ಸಿಲುಕಿದ್ದ ಎಲ್ಲ ಜನರನ್ನು ರಕ್ಷಿಸಿರುವುದು ಖಾತ್ರಿಯಾದ ಬಳಿಕ ಮಿಶ್ರಾ ಅವರು ವಾಯುಪಡೆ ಹೆಲಿಕಾಫ್ಟರ್‌ ಇಳಿಸಿದ ಹಗ್ಗ ಹಿಡಿದು ಮೇಲಕ್ಕೆ ಸಾಗಿದ್ದಾರೆ. ಬಿಳಿಯ ಕುರ್ತಾ ಮತ್ತು ಕಪ್ಪು ಬಣ್ಣದ ಜಾಕೆಟ್‌ ಧರಿಸಿದ್ದ ಮಿಶ್ರಾ ಅವರು ಹಗ್ಗ ಹಿಡಿದು ಹೆಲಿಕಾಪ್ಟರ್‌ನೊಳಗೆ ಏರಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಪ್ರಚಾರದ ಸ್ಟಂಟ್‌: ಕಾಂಗ್ರೆಸ್‌ ಟೀಕೆ

ಈ ಘಟನೆಯನ್ನು ಕಾಂಗ್ರೆಸ್‌, ಪ್ರಚಾರಕ್ಕಾಗಿ ನಡೆಸಿದ ಸ್ಟಂಟ್‌ ಎಡವಟ್ಟಾಗಿದೆ ಎಂದು ಟೀಕಿಸಿದೆ. 'ನಮ್ಮ ಗೃಹ ಸಚಿವರು ಸ್ಪೈಡರ್‌ಮ್ಯಾನ್‌ನಂತೆ ವರ್ತಿಸಲು ಹೋಗಿ ಅಪಾಯಕ್ಕೆ ಸಿಲುಕಿದರು. ಅವರೊಂದಿಗೆ ಪ್ರವಾಹದಲ್ಲಿದ್ದ ಜನರು ಮತ್ತು ಅವರೊಂದಿಗೆ ತೆರಳಿದ್ದವರೂ ಸಹ ಅಪಾಯಕ್ಕೆ ಸಿಲುಕಿದರು. ಅದೊಂದು ಪ್ರಚಾರ ತಂತ್ರವಾಗಿತ್ತು ಹಾಗೂ ಅಲ್ಲಿ ಎಡವಟ್ಟಾಗಿದೆ' ಎಂದು ಕಾಂಗ್ರೆಸ್‌ ಮುಖಂಡ ಭೂಪೇಂದ್ರ ಗುಪ್ತಾ ಹೇಳಿರುವುದಾಗಿ ವರದಿಯಾಗಿದೆ.

ದತಿಯಾ ಜಿಲ್ಲೆಯಲ್ಲಿ ಪ್ರವಾಹದಿಂದ ಎರಡು ಸೇತುವೆಗಳು ಕುಸಿದಿವೆ ಹಾಗೂ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಸೇತುವೆಯು ಬಿರುಕು ಬಿಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆ ರಸ್ತೆಗಳನ್ನು ಬಂದ್‌ ಮಾಡಿರುವುದಾಗಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT