ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕೇರ್ಸ್ ಫಂಡ್: ತನಿಖೆಗೆ ಉದ್ಧವ್ ಠಾಕ್ರೆ ಆಗ್ರಹ‌

Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪಿಎಂ ಕೇರ್ಸ್‌ ಫಂಡ್‌ ಕುರಿತು ಶನಿವಾರ ತನಿಖೆಗೆ ಆಗ್ರಹಿಸುವ ಮೂಲಕ, ಕೋವಿಡ್ ಸೌಲಭ್ಯ ಸಂಬಂಧ ಬೃಹತ್ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಆಪ್ತರಾದ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮಕ್ಕೆ ತಿರುಗೇಟು ನೀಡಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೋವಿಡ್ ಸಾಂಕ್ರಾಮಿಕದ ಸಮಯಲ್ಲಿ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೈಗೊಂಡ ಕೆಲಸಗಳ ಕುರಿತು ಸರ್ಕಾರ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

‘ನಾವು ಯಾವುದೇ ತನಿಖೆಗೂ ಹೆದರುವುದಿಲ್ಲ. ಉತ್ತರಪ್ರದೇಶ, ಗುಜರಾತ್ ಹಾಗೂ ಮಹರಾಷ್ಟ್ರದ ಏಕನಾಥ ಶಿಂದೆ ನೇತೃತ್ವದ ಸರ್ಕಾರಗಳೆಲ್ಲವೂ ಬಿಜೆಪಿಯಿಂದ ನಿಯಂತ್ರಿಸಲ್ಪಟ್ಟಿವೆ. ನೀವು (ಸರ್ಕಾರ) ತನಿಖೆ ಮಾಡಲು ಬಯಸುವಿರಾದರೆ, ಠಾಣೆ ನಗರ ಪಾಲಿಕೆ, ಪಿಂಪ್ರಿ–ಚಿಂಚ್‌ವಾಡಾ, ಪುಣೆ ಮತ್ತು ನಾಗ್ಪುರದ ಸ್ಥಳೀಯ ಸಂಸ್ಥೆಗಳ ಕುರಿತೂ ತನಿಖೆ ಮಾಡಬೇಕು’ ಎಂದೂ ಅವರು ಆಗ್ರಹಿಸಿದರು.

‘ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ತನಿಖೆಯಾಗಲಿ. ಪಿಎಂ ಕೇರ್ಸ್ ಫಂಡ್ ಯಾವುದೇ ತನಿಖೆ ವ್ಯಾಪ್ತಿಗೆ ಬರುವುದಿಲ್ಲ. ಅದರಲ್ಲಿ ಲಕ್ಷಾಂತರ, ಸಾವಿರಾರು ಕೋಟಿ ಮೊತ್ತದ ಹಣವು ಸಂಗ್ರಹವಾಗಿದೆ. ಹಲವು ವೆಂಟಿಲೇಟರ್‌ಗಳು ಸಹ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಈ ಬಗ್ಗೆ ನಾವೂ ಕೂಡಾ ತನಿಖೆ ನಡೆಸುತ್ತೇವೆ’ ಎಂದರು.

ಶಿವಸೇನಾದ (ಯುಬಿಟಿ) ನಾಯಕರಾದ ಸಂಜಯ್ ರಾವುತ್, ಆದಿತ್ಯ ಠಾಕ್ರೆ ಮತ್ತು ಬಿಎಂಸಿಯ ಕೇಂದ್ರ ಖರೀದಿ ಇಲಾಖೆಗೆ ನಿಕಟವಾಗಿರುವ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಇ.ಡಿ ಇತ್ತೀಚೆಗೆ ಶೋಧ ಕಾರ್ಯ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT