ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಯೋಜನಾ ಮೊತ್ತ ಇಳಿಕೆ; ಕಾಲುವೆ ಬದಲು ಪೈಪ್‌ ಮೂಲಕ ನೀರು

ಪರಿಷ್ಕೃತ ಯೋಜನಾ ವರದಿ ಕೊನೆಗೂ ಜಲ ಆಯೋಗಕ್ಕೆ ಸಲ್ಲಿಕೆ
Last Updated 26 ಜುಲೈ 2022, 21:03 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ (ಕಳಸಾ–ಬಂಡೂರಿ) ಯೋಜನೆಯ ಸ್ವರೂಪವನ್ನೇ ಬದಲಿಸಿರುವ ಕರ್ನಾಟಕ ಸರ್ಕಾರ, ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಅನ್ನು ಕೇಂದ್ರ ಜಲ ಆಯೋಗಕ್ಕೆ ಕೊನೆಗೂ ಸಲ್ಲಿಸಿದೆ.

ಈ ಯೋಜನೆಯು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. 2012ರಲ್ಲಿ ಈ ಯೋಜನೆಯ ವೆಚ್ಚ ₹840 ಕೋಟಿ ಆಗಿತ್ತು. ಕರ್ನಾಟಕ ಸರ್ಕಾರ 2021–22ರಲ್ಲಿ ಯೋಜನಾ ಮೊತ್ತವನ್ನು ₹1,677 ಕೋಟಿಗೆ ಏರಿಸಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಯೋಜನೆಯ ಸ್ವರೂಪ ಬದಲಿಸಿದ್ದರಿಂದ ಯೋಜನಾ ಮೊತ್ತ ₹1 ಸಾವಿರ ಕೋಟಿಗೆ ಇಳಿಕೆಯಾಗಿದೆ. ಈ ಸಲದ ಬಜೆಟ್‌ನಲ್ಲಿ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ₹500 ಕೋಟಿ ಮೀಸಲಿಡಲಾಗಿದೆ.

ಈ ಯೋಜನೆಗೆ 499 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಲಾಗಿತ್ತು. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ಯಾವುದೇತಕರಾರು ಇಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 2019ರಲ್ಲೇ ಸ್ಪಷ್ಟಪಡಿಸಿದೆ. ಆದರೂ, ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಒಪ್ಪಿಗೆ ಪಡೆಯಬೇಕಿದೆ. ಕಾಲುವೆಗಳ ಮೂಲಕ ನೀರು ಹರಿಸಿದರೆ 499 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.

ಹಾಗಾಗಿ, ಅಗತ್ಯ ಇರುವ ಕಡೆಗಳಲ್ಲಷ್ಟೇ ಕಾಲುವೆ ನಿರ್ಮಿಸಿ ಉಳಿದ ಕಡೆಯಲ್ಲಿ ಪೈಪ್‌ ಮೂಲಕ (ರಸ್ತೆ ಅಂಚಿನಲ್ಲಿ) ನೀರು ಕೊಂಡೊಯ್ಯಲು ಪರಿಷ್ಕೃತ ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ, ಅರಣ್ಯ ಭೂಮಿ ಸ್ವಾಧೀನ ಪ್ರಮಾಣ 59 ಹೆಕ್ಟೇರ್‌ಗೆ ಇಳಿದಿದೆ.

40 ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆದರೆ ಸಾಕು. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಎರಡು ಹಂತಗಳಾಗಿ ವಿಭಜಿಸಿ ಎರಡು ಪ್ರತ್ಯೇಕ ಪ್ರಸ್ತಾವಗಳನ್ನು ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿದೆ. ಪ್ರಾದೇಶಿಕ ಕಚೇರಿಯಿಂದ ಶೀಘ್ರ ಅನುಮೋದನೆ ಸಿಗುವ ವಿಶ್ವಾಸ ಇದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

ಆರಂಭದಲ್ಲಿ 28 ಮೀಟರ್ ಎತ್ತರದ ಅಣೆಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಇದೀಗ ಅಣೆಕಟ್ಟೆಯ ಎತ್ತರವನ್ನು 11 ಮೀಟರ್‌ಗೆ ಕುಗ್ಗಿಸಲಾಗಿದೆ ಎಂದು ಡಿಪಿಆರ್‌ನಲ್ಲಿ ತಿಳಿಸಲಾಗಿದೆ.

ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ →ಆಗಸ್ಟ್‌ 14ರಂದು ಕಳಸಾ– →ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿನೀರಿನ ಹಂಚಿಕೆ ಮಾಡಿದೆ. ಬಳಿಕ ಕರ್ನಾಟಕ ಸರ್ಕಾರವು ಯೋಜನೆಯ ಪೂರ್ವ- ಕಾರ್ಯಸಾಧ್ಯತಾ ವರದಿಗಳನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಆಯೋಗವು, ‘ನ್ಯಾಯಮೂರ್ತಿ ಬಚಾವತ್‌ ಆಯೋಗದ ವರದಿಯ ಪ್ರಕಾರ, ಈ ಯೋಜನೆಗೆ ಕೃಷ್ಣಾ ನದಿ ತೀರದ ಇತರ ರಾಜ್ಯಗಳ ಅನುಮತಿ ಕೂಡ ಅಗತ್ಯ’ ಎಂದು ಸ್ಪಷ್ಡಪಡಿಸಿತ್ತು. ‘ಬಚಾವತ್‌ ಅಯೋಗದ ಷರತ್ತಿನ ಪ್ರಕಾರ, ಮಹದಾಯಿ ಯೋಜನೆಗೆ ನದಿ-ತೀರದ ಇತರ ರಾಜ್ಯಗಳ ಅನುಮತಿ ಪಡೆಯುವುದು ಕಡ್ಡಾಯವಲ್ಲ’ ಎಂದು ಕರ್ನಾಟಕ ಸರ್ಕಾರವು ಆಯೋಗಕ್ಕೆ ಸ್ಪಷ್ಟನೆ ನೀಡಿದೆ.

‘ಯೋಜನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಕೇಂದ್ರ ಜಲಶಕ್ತಿ ಸಚಿವರಿಗೆ ನಿರಂತರ ಒತ್ತಡ ಹೇರಲಾಗಿದೆ.ಕೇಂದ್ರ ಜಲ ಆಯೋಗವು ಕೆಲವೇ ದಿನಗಳಲ್ಲಿ ಪೂರ್ವ–ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡುವ ವಿಶ್ವಾಸ ಇದೆ. ಬಳಿಕ ಡಿಪಿಆರ್‌ಗೆ ಅನುಮೋದನೆ ಪಡೆಯುವುದು ಕಷ್ಟದ ಕೆಲಸವೇನಲ್ಲ’ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT