ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಸೇನಾ–ಬಿಜೆಪಿ ಸಂಬಂಧ ಆಮಿರ್‌–ಕಿರಣ್‌ ರಾವ್‌ ಅವರಂತೆ: ಸಂಜಯ್‌ ರಾವತ್‌

ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ಇರುವ ಸಂಬಂಧ ಭಾರತ–ಪಾಕಿಸ್ತಾನದಂತೆ ಅಲ್ಲ, ಆಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ ಅವರಂತೆ ಎಂದು ಶಿವಸೇನಾ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.

'ಶಿವಸೇನಾ ಮತ್ತು ಬಿಜೆಪಿಯು ರಾಜಕೀಯವಾಗಿ ಭಿನ್ನ ಹಾದಿಯನ್ನು ಅನುಸರಿಸುತ್ತವೆ, ಆದರೆ ಉಭಯ ಪಕ್ಷಗಳ ನಡುವೆ ಸ್ನೇಹಕ್ಕೆ ತೊಡಕಾಗುವುದಿಲ್ಲ' ಎಂದು ಸಂಜಯ್‌ ರಾವತ್‌ ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ.

'ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಶತ್ರುಗಳಲ್ಲ' ಎಂದು ಮಹಾರಾಷ್ಟ್ರದ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಭಾನುವಾರ ಹೇಳಿದ್ದರು. ಇದು ಮಹಾರಾಷ್ಟ್ರದ ರಾಜಕಾರಣದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದು, ಈ ಹೇಳಿಕೆಗೆ ರಾವತ್‌ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

'ನಮ್ಮ ಸ್ನೇಹಿತರು (ಶಿವಸೇನಾ) ನಮ್ಮೊಂದಿಗೆ ಸೇರಿ 2019ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯ ನಂತರ, ನಾವು ವಿರೋಧಿಸಿದ್ದ ಜನರೊಂದಿಗೆ (ಎನ್‌ಸಿಪಿ, ಕಾಂಗ್ರೆಸ್‌) ಅವರು(ಶಿವಸೇನಾ) ಕೈಜೋಡಿಸಿದರು' ಎಂದು ಫಡಣವಿಸ್ ಹೇಳಿಕೆ ನೀಡಿದ್ದಾರೆ.

ಆಡಳಿತಾರೂಢ ಶಿವಸೇನಾ ಮುಖ್ಯ ವಕ್ತಾರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್‌ ರಾವುತ್‌ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಫಡಣವಿಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಆ ಭೇಟಿಯ ಹಿಂದೆ ರಾಜಕಾರಣವಿರಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿತ್ತು.

ಸಂಜಯ್‌ ರಾವುತ್‌ ಅವರು, ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕರೂ ಆಗಿದ್ದು, ದೇವೇಂದ್ರದ ಫಡಣವಿಸ್ ಅವರೊಂದಿಗೆ ನಿಗದಿಯಾಗಿರುವ ಸಂದರ್ಶನದ ಕುರಿತು ಚರ್ಚಿಸಲು ಭೇಟಿ ನಡೆದಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT