ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC: ಮಲ್ಲಿಕಾರ್ಜುನ ಖರ್ಗೆ ‘ಕೈ‘ಗೆ ಹೊಸ ತಂಡ- ನಿಷ್ಠರು–ಭಿನ್ನರು ಇಬ್ಬರಿಗೂ ಮಣೆ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ
Published 21 ಆಗಸ್ಟ್ 2023, 0:44 IST
Last Updated 21 ಆಗಸ್ಟ್ 2023, 0:44 IST
ಅಕ್ಷರ ಗಾತ್ರ

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 10 ತಿಂಗಳ ಬಳಿಕ ಅಳೆದೂ ತೂಗಿ ’ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ಯನ್ನು (ಸಿಡಬ್ಲ್ಯುಸಿ) ಭಾನುವಾರ ರಚನೆ ಮಾಡಿದ್ದಾರೆ. ಸಮಿತಿಯಲ್ಲಿ ಪಕ್ಷ ನಿಷ್ಠರು ಹಾಗೂ ಭಿನ್ನರಿಗೆ ಸ್ಥಾನ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. 

ಲೋಕಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಖರ್ಗೆ ಅವರು ವಿವೇಚನಾಧಿಕಾರ ಬಳಸಿ ತಮ್ಮ ತಂಡವನ್ನು ರಚಿಸಿದ್ದಾರೆ. ಪಕ್ಷದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಈ ಅತ್ಯುನ್ನತ ಸಮಿತಿಯಲ್ಲಿ ಖರ್ಗೆ ಅವರು ಹೊಂದಾಣಿಕೆ ಸೂತ್ರಕ್ಕೂ ಒತ್ತು ನೀಡಿದ್ದಾರೆ. ಹೀಗಾಗಿ ಸಚಿನ್‌ ಪೈಲಟ್‌, ಶಶಿ ತರೂರ್‌, ಗೌರವ್‌ ಗೊಗೊಯ್‌ ಹಾಗೂ ಸಯ್ಯದ್‌ ನಾಸಿರ್‌ ಹುಸೇನ್‌ ಅವರಿಗೆ ಮೊದಲ ಬಾರಿಗೆ ಪಕ್ಷದ ಉನ್ನತ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.

ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಲ್ಲದೆ ಮುಂಚೂಣಿ ನಾಯಕರಾದ ಮನಮೋಹನ್ ಸಿಂಗ್‌, ರಾಹುಲ್‌ ಗಾಂಧಿ ಸದಸ್ಯರಾಗಿ ಮುಂದುವರಿದಿದ್ದಾರೆ. 

ಛತ್ತೀಸಗಢದ ರಾಯಪುರದಲ್ಲಿ ಫೆಬ್ರುವರಿಯಲ್ಲಿ ನಡೆದ ಕಾಂಗ್ರೆಸ್‌ನ ಮಹಾಧಿವೇಶನದಲ್ಲಿ ಸಮಿತಿಯನ್ನು ಶೀಘ್ರದಲ್ಲಿ ರಚನೆ ಮಾಡಬೇಕು ಎಂದು ಚರ್ಚೆಗಳು ನಡೆದಿದ್ದವು. ಚುನಾವಣಾ ಪ್ರಕ್ರಿಯೆ ಮೂಲಕ ಸದಸ್ಯರ ನೇಮಕ ಮಾಡಬೇಕು ಎಂದು ಕೆಲವು ಹಿರಿಯ ನಾಯಕರು ಒತ್ತಾಯಿಸಿದ್ದರು. ಅದಕ್ಕೆ ಸಹಮತ ವ್ಯಕ್ತವಾಗಿರಲಿಲ್ಲ. ಸದಸ್ಯರ ಹೆಸರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಖರ್ಗೆ ಅವರಿಗೆ ಪಕ್ಷದ ಸಂಚಾಲಕ ಸಮಿತಿ ನೀಡಿತ್ತು. ಹೊಸ ಕೋಟಾದ ಪ್ರಕಾರ, ಯುವಜನತೆ, ದಲಿತರು, ಬುಡಕಟ್ಟು, ಮಹಿಳೆಯರು, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಶೇ 50ರಷ್ಟು ಮೀಸಲಾತಿ ನೀಡಲು ಒಲವು ವ್ಯಕ್ತವಾಗಿತ್ತು. ರಾಯಪುರ ಸಭೆ ಮುಗಿದ ಆರು ತಿಂಗಳ ಬಳಿಕ ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ತಂಡವನ್ನು ಕಟ್ಟಿದ್ದಾರೆ. 

ಆದರೆ, ಕೋಟಾ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ತಂಡದಲ್ಲಿ ಕೇವಲ ಆರು ಮಹಿಳೆಯರು ಇದ್ದಾರೆ. 50 ವರ್ಷದೊಳಗಿನವರು ಪೈಲಟ್‌ ಹಾಗೂ ಗೊಗೊಯ್‌ ಮಾತ್ರ. ವಿಶೇಷ ಆಹ್ವಾನಿತರಲ್ಲಿ ಒಂಬತ್ತು ಮಹಿಳೆಯರು ಇದ್ದಾರೆ. ಆದರೆ, ಕನ್ಹಯ್ಯಾ ಕುಮಾರ್ ಅವರಂತಹ ಯುವ ಮುಖಗಳೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸಯ್ಯದ್‌ ನಾಸಿರ್‌ ಹುಸೇನ್‌
ಸಯ್ಯದ್‌ ನಾಸಿರ್‌ ಹುಸೇನ್‌

ಈ ಹಿಂದಿನ ಸಮಿತಿಯಲ್ಲಿದ್ದ ಬಹುತೇಕ ಹಿರಿಯ ನಾಯಕರಿಗೆ ಹೊಸ ಸಮಿತಿಯಲ್ಲಿ ಜಾಗ ಸಿಕ್ಕಿದೆ. ಕೆ.ಸಿ.ವೇಣುಗೋಪಾಲ್‌, ಪ್ರಿಯಾಂಕಾ ಗಾಂಧಿ ವಾದ್ರಾ, ದಿಗ್ವಿಜಯ್‌ ಸಿಂಗ್‌, ಪಿ.ಚಿದಂಬರಂ, ತಾರಿಕ್‌ ಅನ್ವರ್‌, ಜೈರಾಮ್‌ ರಮೇಶ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ, ಅಂಬಿಕಾ ಸೋನಿ, ಮೀರಾ ಕುಮಾರ್‌, ಕುಮಾರಿ ಸೆಲ್ಜಾ ಸೇರಿದಂತೆ ಹೆಚ್ಚಿನವರು ಈ ಹಿಂದಿನ ಸಮಿತಿಯ ಭಾಗವಾಗಿದ್ದರು. ಸಮಿತಿ ರಚನೆ ಬಳಿಕ ದೊಡ್ಡ ಮಟ್ಟದ ಪ್ರತಿರೋಧದ ಧ್ವನಿ ಬಾರದಂತೆ ಖರ್ಗೆ ಅವರು ಮುಂಜಾಗ್ರತೆ ವಹಿಸಿದ್ದಾರೆ. 

ರಾಷ್ಟ್ರ ರಾಜಕಾರಣದ ಭಾಗವಾಗುವುದಿಲ್ಲ ಎಂದು ಪ್ರಕಟಿಸಿ ತಮ್ಮ ಚಟುವಟಿಕೆಯನ್ನು ತಿರುವನಂತಪುರಕ್ಕೆ ಸೀಮಿತಗೊಳಿಸಿದ್ದ ಗಾಂಧಿ ಕುಟುಂಬದ ಪರಮಾಪ್ತ ಎ.ಕೆ. ಆ್ಯಂಟನಿ ಅವರು ಸಮಿತಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ ಅವರು ರಾಹುಲ್‌ ಗಾಂಧಿ ಅವರನ್ನು ಟೀಕಿಸಿ ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲವು ದಿನಗಳ ಹಿಂದೆ ನೇಮಿಸಲಾಗಿತ್ತು. 

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖರ್ಗೆ ಅವರಿಗೆ ತರೂರ್ ಎದುರಾಳಿಯಾಗಿದ್ದರು. ಅವರು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಸಮಿತಿಯಲ್ಲಿ ತರೂರ್‌ ಅವರನ್ನು ಸೇರಿಸುವ ಬಗ್ಗೆ ಪಕ್ಷದ ವಲಯದಲ್ಲಿ ಊಹಾಪೋಹಗಳು ಇದ್ದವು. ಆದರೆ, ಹಾಗೇನೂ ಆಗಿಲ್ಲ. 

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹಾಗೂ ರಾಜಸ್ಥಾನದ ಸಚಿವ ಮಹೇಂದ್ರಜೀತ್‌ ಸಿಂಗ್‌ ಮಾಳವಿಯಾ ಸಮಿತಿಗೆ ಅಚ್ಚರಿಯ ಪ್ರವೇಶ ಪಡೆದಿದ್ದಾರೆ. ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಬಳಿಕವೂ ಚನ್ನಿ ಅವರ ಮೇಲೆ ರಾಷ್ಟ್ರೀಯ ನಾಯಕರು ವಿಶ್ವಾಸ ಉಳಿಸಿಕೊಂಡಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ನವಜ್ಯೋತ್‌ ಸಿಂಗ್‌ ಸಿದ್ದು ವಿಷಯದಲ್ಲಿ ರಾಷ್ಟ್ರೀಯ ನಾಯಕರು ಉದಾರತೆ ತೋರಿಲ್ಲ.

ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ
ಬಿ.ವಿ. ಶ್ರೀನಿವಾಸ್
ಬಿ.ವಿ. ಶ್ರೀನಿವಾಸ್

‘ಜಿ–23’ ನಾಯಕರಿಗೂ ಮನ್ನಣೆ

ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಟೀಕಿಸಿ ಪತ್ರ ಬರೆದು ‘ಕೈ’ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಹಿರಿಯ ನಾಯಕರನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷದೊಳಗೆ ಹೆಚ್ಚಿನ ಭಿನ್ನಮತ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.  ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಮತ್ತು ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ‘ಜಿ–23’ ಭಿನ್ನಮತೀಯ ನಾಯಕರ ಗುಂಪಿನ ಭಾಗವಾಗಿದ್ದ ಮುಕುಲ್ ವಾಸ್ನಿಕ್ ಆನಂದ್ ಶರ್ಮಾ ಮತ್ತು ತರೂರ್ ಸಮಿತಿಯ ‘ಸಾಮಾನ್ಯ’ ಸದಸ್ಯರಲ್ಲಿ ಸೇರಿದ್ದಾರೆ. ಗುಂಪಿನ ಭಾಗವಾಗಿದ್ದ ಮನೀಶ್ ತಿವಾರಿ ಮತ್ತು ವೀರಪ್ಪ ಮೊಯಲಿ ಅವರನ್ನು ಕಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ.

ಮುಖ್ಯಮಂತ್ರಿಗಳಿಗೆ ಸಂದೇಶ?

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಜತೆಗೆ ಸದಾ ಸಂಘರ್ಷದಲ್ಲಿರುವ ನಾಯಕರನ್ನು ಸಹ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಈ ನಾಯಕರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಮುಖ್ಯಮಂತ್ರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನಕ್ಕೆ ‘ಕೈ’ ಹಾಕಲಾಗಿದೆ. ಪಕ್ಷದ ಉನ್ನತ ಸಮಿತಿಯ ಭಾಗವನ್ನಾಗಿ ಮಾಡಿ ಭಿನ್ನಮತೀಯ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶವೂ ಇದರ ಹಿಂದಿದೆ.   ರಾಜಸ್ಥಾನದ ಯುವ ನಾಯಕ ಸಚಿನ್‌ ಪೈಲಟ್‌ ಅವರು ಅಲ್ಲಿನ ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಜತೆಗೆ ನಾಲ್ಕು ವರ್ಷಗಳಿಂದ ಭಿನ್ನಮತ ಹೊಂದಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು ಪಕ್ಷ ಬಿಡಲು ಸಜ್ಜಾಗಿದ್ದರು. ಖರ್ಗೆ ಹಾಗೂ ರಾಹುಲ್‌ ಅವರು ಜೂನ್‌ ತಿಂಗಳಲ್ಲಿ ಪೈಲಟ್‌ ಜತೆಗೆ ಮಾತುಕತೆ ನಡೆಸಿ ‘ಸಂಧಾನ ಸೂತ್ರ’ ಹೆಣೆದಿದ್ದರು. ಬಳಿಕ ಪೈಲಟ್‌ ಅವರು ಗೆಹಲೋತ್‌ ಅವರನ್ನು ಟೀಕಿಸುವುದನ್ನು ನಿಲ್ಲಿಸಿದ್ದರು.  ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೊಂದಿಗೆ ಭಿನ್ನಮತ ಹೊಂದಿರುವ ಸಚಿವ ತಾಮ್ರಧ್ವಜ್‌ ಸಾಹು ಅವರನ್ನು ಸಹ ಸಮಿತಿಯ ಭಾಗವನ್ನಾಗಿ ಮಾಡಲಾಗಿದೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಪತ್ನಿ ಪ್ರತಿಭಾ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಸುಖ್ವಿಂದರ್ ಸಿಂಗ್‌ ಸುಖು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಹಿರಿಯ ನಾಯಕ ಆನಂದ ಶರ್ಮಾ ಅವರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೀಗ ಪ್ರತಿಭಾ ಸಿಂಗ್‌ ಹಾಗೂ ಆನಂದ ಶರ್ಮಾ ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ.  ಕರ್ನಾಟಕದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಮೊದಲಿನಿಂದಲೂ ಸಿದ್ದರಾಮಯ್ಯ ಅವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದವರು ಅಲ್ಲ. ತಮಗೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಕೋಪಗೊಂಡಿದ್ದರು. ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದರು. ಪಕ್ಷದ ರಾಷ್ಟ್ರೀಯ ನಾಯಕರು ಮನವೊಲಿಸಿ ರಾಜೀನಾಮೆ ನೀಡದಂತೆ ತಡೆದಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ನೀಡುವ ಅಭಯ ನೀಡಿದ್ದರು. ಇದೀಗ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೂ ಪರೋಕ್ಷ ಸಂದೇಶ ರವಾನಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. 

ಖರ್ಗೆ ಆಪ್ತ ನಾಸಿರ್ ಹೈಜಂಪ್‌!

ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರೆಂದು ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದ ರಾಜ್ಯಸಭಾ ಸದಸ್ಯ ಸಯ್ಯದ್‌ ನಾಸಿರ್ ಹುಸೇನ್‌ ಅವರನ್ನು ಸಮಿತಿಯ ‘ಸಾಮಾನ್ಯ’ ಸದಸ್ಯರನ್ನಾಗಿ ನೇಮಿಸುವ ಮೂಲಕ ಬಹುದೊಡ್ಡ ಬಡ್ತಿ ನೀಡಲಾಗಿದೆ. ಈ ವಿಷಯದಲ್ಲಿ ಅವರಿಗೆ ಎಂ.ವೀರಪ್ಪ ಮೊಯಿಲಿ ಹಾಗೂ ಬಿ.ಕೆ.ಹರಿಪ್ರಸಾದ್‌ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಮೊಯಿಲಿ ಹಾಗೂ ಹರಿಪ್ರಸಾದ್‌ ಅವರನ್ನು ‘ಶಾಶ್ವತ ಆಹ್ವಾನಿತರು’ ಎಂದು ನೇಮಿಸಲಾಗಿದೆ.  ನಾಸಿರ್ ಅವರು ರಾಜ್ಯಸಭೆಯಲ್ಲಿ ಪಕ್ಷದ ಸಚೇತಕರು ಹಾಗೂ ಕಾಂಗ್ರೆಸ್‌ ಅಧ್ಯಕ್ಷರ ಕಚೇರಿಯಲ್ಲಿ ಎಐಸಿಸಿ ಸಂಯೋಜಕರು. ಅಂತರಾಷ್ಟ್ರೀಯ ಅಧ್ಯಯನದಲ್ಲಿ ಪಿಎಚ್‌.ಡಿ ಪಡೆದಿರುವ ಹುಸೇನ್ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ರಾಜಕೀಯದ ಮೂಲಕ ಪ್ರವರ್ಧಮಾನಕ್ಕೆ ಬಂದವರು. ರಾಜ್ಯಸಭಾ ಸದಸ್ಯರಾದ ಬಳಿಕ ಖರ್ಗೆ ಅವರಿಗೆ ಪರಮಾಪ್ತರಾದವರು.  ಕರ್ನಾಟಕದ ಸಚಿವರಾದ ಕೆ.ಎಚ್‌.ಮುನಿಯಪ್ಪ ಎಚ್.ಕೆ.ಪಾಟೀಲ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಈ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಮುನಿಯಪ್ಪ ಅವರು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಸ್ಥಳಾಂತರ ಆಗಿದ್ದಾರೆ. ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು. ಎಚ್‌.ಕೆ.ಪಾಟೀಲ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಮಹಾರಾಷ್ಟ್ರ ಗೋವಾ ರಾಜ್ಯಗಳ ಉಸ್ತುವಾರಿಗಳಾಗಿದ್ದಾರೆ. ಕರ್ನಾಟಕ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ಅವರನ್ನು ರಾಷ್ಟ್ರೀಯ ಸಮಿತಿಯಲ್ಲಿ ಪರಿಗಣಿಸಿಲ್ಲ. ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬಿ.ವಿ.ಶ್ರೀನಿವಾಸ್‌ ಅವರು ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT