ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ ಪ್ರಕರಣ ಬಿಜೆಪಿ ಪಿತೂರಿ: ಟಿಎಂಸಿ

Published 4 ಮೇ 2024, 13:06 IST
Last Updated 4 ಮೇ 2024, 13:06 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂದೇಶ್‌ಖಾಲಿ ಪ್ರಕರಣವು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಘನತೆಗೆ ಧಕ್ಕೆ ತರಲು ಬಿಜೆಪಿ ಮಾಡಿರುವ ಪಿತೂರಿ ಎಂದು ಟಿಎಂಸಿ ಶನಿವಾರ ಆರೋಪಿಸಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ.  ವಿಡಿಯೊದಲ್ಲಿ,  ಸಂದೇಶ್‌ಖಾಲಿಯ ಬಿಜೆಪಿಯ ಮಂಡಲ ಅಧ್ಯಕ್ಷ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ‘ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸ್ಥ ಸುವೇಂದು ಅಧಿಕಾರಿ ಪ್ರಕರಣದ ಹಿಂದೆ ಪಿತೂರಿ ಮಾಡಿದ್ದಾರೆ’ ಎಂದು ಹೇಳುವ ದೃಶ್ಯವಿದೆ.

ಶಹಜಹಾನ್‌ ಶೇಖ್‌ ಸೇರಿದಂತೆ ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವಂತೆ ಸ್ಥಳೀಯ ಮಹಿಳೆಯರನ್ನು ಪ್ರಚೋದಿಸಬೇಕು ಎಂದು  ತನಗೆ ಮತ್ತು ಬಿಜೆಪಿಯ ಕೆಲ ನಾಯಕರಿಗೆ ಅಧಿಕಾರಿ ಸೂಚಿಸಿದ್ದರು ಎಂದೂ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ, ನಂದಿಗ್ರಾಮ ಶಾಸಕ ಅಧಿಕಾರಿ ಸಂದೇಶ್‌ಖಾಲಿಯ ಮನೆಮನೆಗಳಲ್ಲಿ ಬಂದೂಕು ಇರಿಸಿದ್ದರು. ಅವುಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆಯಿತು ಎಂದು ಹೇಳಿದ್ದಾರೆ.

‘ಸುವೇಂದು ಅಧಿಕಾರಿ, ಸ್ಥಳೀಯರಿಗೆ ಹಣ ಕೊಟ್ಟು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಿಂಬಿಸಿ ಬಂಗಾಳ ಮತ್ತು ಸಂದೇಶ್‌ಖಾಲಿಗೆ ಅಪಖ್ಯಾತಿ ತಂದರು’ ಎಂದು ಟಿಎಂಸಿ ‘ಎಕ್ಸ್‌’ನಲ್ಲಿ ಕಿಡಿಕಾರಿದೆ.

ಪಶ್ಚಿಮ ಬಂಗಾಳವನ್ನು ಅವಹೇಳನ ಮಾಡಲು ಬಿಜೆಪಿ ಯಾವ ರೀತಿ ಪ್ರಯತ್ನ ಮಾಡಿದೆ ಎಂದು ವಿಡಿಯೊ ಮೂಲಕ ಬಹಿರಂಗವಾಗಿದೆ ಎಂದೂ ಹೇಳಿದೆ.

ವಿಡಿಯೊದ ಸತ್ಯಾಸತ್ಯತೆ ಬಗ್ಗೆ ಸುದ್ದಿಸಂಸ್ಥೆ  ಪರಿಶೀಲಿಸಿಲ್ಲ.

ಬಿಜೆಪಿಯ ಸ್ಕ್ರಿಪ್ಟ್: ಮಮತಾ ಸಂದೇಶ್‌ಖಾಲಿ ಪ್ರಕರಣವು ಬಿಜೆಪಿಯೇ ಸಿದ್ಧಪಡಿಸಿದ ‘ಕತೆ’ ಎಂದು  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು. ಇದೇ ವೇಳೆ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ನದಿಯಾ ಜಿಲ್ಲೆಯಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ಸಂದೇಶ್‌ಖಾಲಿ ಪ್ರಕರಣ  ಯೋಜಿತ ಪಿತೂರಿ. ಸತ್ಯ ಹೊರಬಂದಿದೆ’ ಎಂದು ಹೇಳಿದರು. ಬಂಗಾಳದ ಪ್ರಗತಿಪರ ಚಿಂತನೆ ಮತ್ತು ಸಂಸ್ಕೃತಿ ವಿರುದ್ಧದ  ದ್ವೇಷದಿಂದ ‘ಬಂಗಾಳ ವಿರೋಧಿ’ಗಳು ಈ ರೀತಿಯ ಪಿತೂರಿ ಮಾಡಿ ರಾಜ್ಯಕ್ಕೆ ಅಪಖ್ಯಾತಿ ತರಲು ಸಾಧ್ಯವಾದಷ್ಟು ಯತ್ನಿಸಿದ್ದಾರೆ ಎಂದು ಹೇಳಿದರು. ಭಾರತ ಇತಿಹಾಸದಲ್ಲಿ ಎಂದೂ ಕೇಂದ್ರದ ಆಡಳಿತಾರೂಢ ಪಕ್ಷವೊಂದು ರಾಜ್ಯ ಮತ್ತು ಜನರಿಗೆ ಕೇಡು ಉಂಟು ಮಾಡುವ ಇಂಥ ಕೆಲಸ ಮಾಡಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT