ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣೆಗೆ ಗಂಭೀರ ಗಾಯ; ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ಮಮತಾ ಬ್ಯಾನರ್ಜಿ

Published 15 ಮಾರ್ಚ್ 2024, 2:24 IST
Last Updated 15 ಮಾರ್ಚ್ 2024, 2:24 IST
ಅಕ್ಷರ ಗಾತ್ರ

ಕೋಲ್ಕತ್ತ: ಮನೆಯಲ್ಲಿ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ರಾತ್ರಿ ಕೋಲ್ಕತ್ತದ ಎಸ್ಎಸ್‌ಕೆಎಂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

‘ಮನೆಯಲ್ಲಿ ಅಚಾನಕ್ ಆಗಿ ಬಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಹಣೆಗೆ ಕೆಲವು ಹೊಲಿಗೆಗಳನ್ನು ಹಾಕಲಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ’ಎಂದು ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂದೋಪಾಧ್ಯಾಯ ಹೇಳಿದ್ದಾರೆ.

‘ಅವರು ಮನೆಯೊಳಗೆ ಎಲ್ಲೋ ಬಿದ್ದಿದ್ದಾರೆ. ಅವರ ಹಣೆಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಹೊಲಿಗೆಗಳ ಅಗತ್ಯವಿತ್ತು. ಹಾಗಾಗಿ, ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು’ಎಂದು ಮಮತಾ ಸಹೋದರ ಕಾರ್ತಿಕ್ ಬ್ಯಾನರ್ಜಿ ಬಂಗಾಳಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

‘ಮಮತಾ ಅವರ ಹಣೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯಗಳಾಗಿದ್ದವು, ಅದರಿಂದ ತೀವ್ರವಾಗಿ ರಕ್ತಸ್ರಾವವಾಗಿತ್ತು. ಆರಂಭದಲ್ಲಿ, ನಮ್ಮ ಸಂಸ್ಥೆಯ ನರಶಸ್ತ್ರಚಿಕಿತ್ಸೆ, ಔಷಧ ಮತ್ತು ಹೃದ್ರೋಗ ವಿಭಾಗದ ಹಿರಿಯ ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದರು. ಬಳಿಕ, ಹಣೆಗೆ ಮೂರು ಹೊಲಿಗೆಗಳನ್ನು ಹಾಕಲಾಯಿತು. ಅಗತ್ಯವಿದ್ದ ಡ್ರೆಸ್ಸಿಂಗ್ ಮಾಡಲಾಯಿತು. ಇಸಿಜಿ, ಎಕೋಕಾರ್ಡಿಯೋಗ್ರಾಮ್, ಸಿಟಿ ಸ್ಕ್ಯಾನ್ ಮತ್ತು ಡಾಪ್ಲರ್‌ನಂತಹ ಪರೀಕ್ಷೆಗಳನ್ನು ನಡೆಸಲಾಯಿತು. ನಿಗಾದಲ್ಲಿ ಇರಬೇಕಾಗಿರುವುದರಿಂದ ಆಸ್ಪತ್ರೆಯಲ್ಲಿ ಇರುವಂತೆ ಸೂಚಿಸಲಾಯಿತಾದರೂ ಮಮತಾ ಮನೆಗೆ ತೆರಳಿದ್ದಾರೆ" ಎಂದು ಬಂದೋಪಾಧ್ಯಾಯ ತಿಳಿಸಿದ್ದಾರೆ.

ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಿಸಲಾಗುತ್ತದೆ. ನಾಳೆ ಮತ್ತೆ ಪರೀಕ್ಷೆ ನಡೆಸಿ ಚಿಕಿತ್ಸೆ ಕುರಿತು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT