ಡೆಹ್ರಾಡೂನ್: ‘ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ವ್ಯಕ್ತಿಯೊಬ್ಬರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮತ್ತೊಬ್ಬರು ಕಾಣೆಯಾಗಿದ್ದಾರೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
‘ಮಂಗಳವಾರ ಸಂಜೆ ವೇಳೆಗೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರ 29 ವರ್ಷದ ಮನೀಶ್ ಸೇಠ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ಪ್ರಯತ್ನಗಳ ಬಳಿಕ ಎಸ್‌ಡಿಆರ್‌ಎಫ್ ತಂಡವು ಮೃತದೇಹವನ್ನು ಹೊರತೆಗೆದಿದೆ’ ಎಂದರು.
‘ಡೆಹ್ರಾಡೂನ್ ಜಿಲ್ಲೆಯ ನದಿಯೊಂದರಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ. ಸ್ಥಳೀಯರು ಒಬ್ಬರನ್ನು ಉಳಿಸಿಕೊಂಡಿದ್ದಾರೆ. ಮತ್ತೊಬ್ಬರು ಕಾಣೆಯಾಗಿದ್ದಾರೆ. ಠಿಹರಿ ಜಿಲ್ಲೆಯಲ್ಲಿ ರಾತ್ರಿ ಇಡೀ ಭಾರಿ ಮಳೆ ಸುರಿದ ಪರಿಣಾಮ ಮನೆಗಳಿಗೆ ಹಾನಿಯಾಗಿದ್ದು, ದನ–ಕರುಗಳು ಮೃತಪಟ್ಟಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.