ಇಂಫಾಲ್: ಉಗ್ರರಿಂದ ಅಪಹರಣಕ್ಕೆ ಒಳಗಾಗಿರುವ ಇಬ್ಬರು ಯುವಕರ ಸುರಕ್ಷಿತ ಬಿಡುಗಡೆಗಾಗಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್‌ಸಿಂಗ್ ಸೋಮವಾರ ಇಲ್ಲಿ ಹೇಳಿದರು.
‘ಡಿಜಿಪಿ ಸ್ಥಳಕ್ಕೆ ತೆರಳಿದ್ದು, ಅಪಹರಣಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಿದೆ. ಉಗ್ರರು ಕೆಲವು ಬೇಡಿಕೆಗಳನ್ನಿಟ್ಟಿದ್ದಾರೆ. ಆದರೆ, ಸರ್ಕಾರವು ಯಾವುದೇ ಷರತ್ತುಗಳಿಲ್ಲದೆ ಯುವಕರ ಬಿಡುಗಡೆಗೆ ಪ್ರಯತ್ನಿಸುತ್ತಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಮೂರು ದಿನಗಳ ಹಿಂದೆ ಥೌಬಲ್ ಜಿಲ್ಲೆಯ ಮೂವರು ಯುವಕರನ್ನು ಕಾಂಗ್‌ಪೊಕ್ಪಿಯಲ್ಲಿ ಅಪಹರಿಸಲಾಗಿದೆ. ಈ ಪೈಕಿ ಒಬ್ಬನನ್ನು ಬಿಡುಗಡೆ ಮಾಡಿದ್ದು, ಇನ್ನಿಬ್ಬರನ್ನು ಸೆರೆಯಲ್ಲಿಟ್ಟುಕೊಂಡಿದ್ದಾರೆ. ಇವರ ಸುರಕ್ಷಿತ ಬಿಡುಗಡೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಕೇಂದ್ರದೊಂದಿಗೂ ಸಂಪರ್ಕದಲ್ಲಿದೆ’ ಎಂದು ಹೇಳಿದರು.
ನಾಪತ್ತೆಯಾಗಿರುವ ಇಬ್ಬರು ಯುವಕರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಸಕಲ ಪ್ರಯತ್ನ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.