ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ವರುಷ ಕಳೆದರೂ ಮರಳದ ಹರುಷ

ಸಂಘರ್ಷ–ಹಿಂಸಾಚಾರಕ್ಕೆ ವರ್ಷ * ಮೈತೇಯಿ, ಕುಕಿ ಜನರ ತೀರದ ಸಂಕಷ್ಟ
Published 2 ಮೇ 2024, 23:32 IST
Last Updated 2 ಮೇ 2024, 23:32 IST
ಅಕ್ಷರ ಗಾತ್ರ

ಇಂಫಾಲ್‌/ಚುರಚಾಂದಪುರ(ಮಣಿಪುರ): ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷ ಹಾಗೂ ನಂತರದ ಬೆಳವಣಿಗೆಗಳಿಗೆ ಒಂದು ವರ್ಷವಾಗುತ್ತಿದೆ. ಆದರೆ, ಹಲವು ಮೈತೇಯಿ–ಕುಕಿ ದಂಪತಿ ಪೈಕಿ, ಆಯಾ ಸಮುದಾಯಗಳಿಗಾಗಿ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಗಂಡ–ಹೆಂಡತಿ ಪ್ರತ್ಯೇಕವಾಗಿ ವಾಸ ಮಾಡಬೇಕಾದ ಅನಿವಾರ್ಯ ಸ್ಥಿತಿಯೂ ಮುಂದುವರಿದಿದೆ.

ಸಂಘರ್ಷ ಶುರುವಾದಾಗಿನಿಂದ, ಮನಸುಗಳು ಒಡೆದಿವೆ. ಒಟ್ಟಿಗೆ ಬಾಳುತ್ತಿದ್ದವರು ಈಗ ತಮ್ಮ ಕುಟುಂಬಗಳಿಂದ ದೂರವಾಗಿ ಪ್ರತ್ಯೇಕ ವಾಸದ ಶಿಕ್ಷೆ ಅನುಭವಿಸಬೇಕಾಗಿದೆ. ಇಂಫಾಲ್‌ ಕಣಿವೆಯಲ್ಲಿ ಮೈತೇಯಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದರೆ, ಕುಕಿ ಜನರು ಪರ್ವತ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. 

ಕಳೆದ ವರ್ಷ ಮೇ 3ರಂದು ಭುಗಿಲೆದ್ದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, ಸಾವಿರಾರು ಜನರು ತಮ್ಮ ನೆಲೆ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವವರಲ್ಲಿ ಅಂತರ ಸಮುದಾಯ ವಿವಾಹ ಮಾಡಿಕೊಂಡಿರುವ ಜೋಡಿಗಳು ಮತ್ತೊಂದು ರೀತಿಯ ಸಮಸ್ಯೆಯ ಬೇಗುದಿಗೆ ಸಿಲುಕಿದ್ದಾರೆ.

ಕುಕಿ ಸಮುದಾಯಕ್ಕೆ ಸೇರಿದ ಐರೀನ್ ಹವೋಕಿಪ್‌ ಎಂಬ ಮಹಿಳೆ ಮದುವೆ ನಂತರ ಇಂಫಾಲ್‌ದಲ್ಲಿ ವಾಸಿಸುತ್ತಿದ್ದರು. ಸಂಘರ್ಷ, ಹಿಂಸಾಚಾರ ಕಾರಣದಿಂದಾಗಿ, 42 ವರ್ಷದ ಐರೀನ್‌ ಅವರು ಕಳೆದ ಒಂದು ವರ್ಷದಿಂದ ಕುಕಿ ಸಮುದಾಯ ಬಾಹುಳ್ಯವಿರುವ ಚುರಚಾಂದಪುರದಲ್ಲಿ ತಮ್ಮ ಪಾಲಕರೊಂದಿಗೆ ವಾಸಿಸುತ್ತಿದ್ದಾರೆ.

ಇನ್ನು, ಐರೀನ್‌ ಅವರ ಪತಿ, ಐದು ವರ್ಷದ ಪುತ್ರ ಹಾಗೂ 3 ವರ್ಷದ ಪುತ್ರಿ ಇಂಫಾಲ್‌ನಲ್ಲಿಯೇ ವಾಸ ಮಾಡುತ್ತಿರುವುದು ಪರಿಸ್ಥಿತಿಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

‘ನನ್ನ ಪತಿ ನಿರ್ಮಾಣ ಗುತ್ತಿಗೆದಾರ. ಬಿಷ್ಣುಪುರದಲ್ಲಿ ಪಕ್ಕದ ಮನೆಯೊಂದರ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಅವರ ಪರಿಚಯವಾಯಿತು. ಪರಸ್ಪರ ಪ್ರೀತಿಸಲು ಆರಂಭಿಸಿ ನಾವು, 2018ರಲ್ಲಿ ಮದುವೆಯಾದೆವು’ ಎಂದು ಹವೋಕಿಪ್‌ ಹೇಳುತ್ತಾರೆ.

ಬಿಷ್ಣುಪುರ, ಇಂಫಾಲ್‌ ಮತ್ತು ಚುರಚಾಂದಪುರ ನಡುವೆ ಇದೆ. ಸಂಘರ್ಷ ಭುಗಿಲೇಳುವ ಮೊದಲು ಈ ಪಟ್ಟಣದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ಜನರು ಒಟ್ಟಿಗೆ ಬದುಕುತ್ತಿದ್ದರು. ಈಗ ಪರಿಸ್ಥಿತಿ ಮೊದಲಿನಂತಿಲ್ಲ.

‘ನನ್ನ ಮಕ್ಕಳು ಪತಿ ಜೊತೆ ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚುರಚಾಂದಪುರದಲ್ಲಿ ಮಕ್ಕಳು ಸುರಕ್ಷಿತವಾಗಿ ಇರಲು ಸಾಧ್ಯವೇ ಇಲ್ಲ ಎಂಬ ಆತಂಕ ಇದೆ. ಹೀಗಾಗಿ, ಮಿಜೋರಾಂಗೆ ಹೋಗುತ್ತೇನೆ. ಪತಿ ಮಕ್ಕಳೊಂದಿಗೆ ಅಲ್ಲಿಗೆ ಬರುತ್ತಾರೆ. ಅಲ್ಲಿ ಕುಟುಂಬದ ಸದಸ್ಯರು ಪರಸ್ಪರ ಭೇಟಿ ಮಾಡುತ್ತೇವೆ’ ಎಂದು ಐರೀನ್‌ ವಿವರಿಸುತ್ತಾರೆ.

ಸಂಘರ್ಷಕ್ಕೆ ನಲುಗಿರುವ ಇಂತಹ ಹಲವಾರು ಕುಟುಂಬಗಳು ನಮಗೆ ಮಣಿಪುರದಲ್ಲಿ ಸಿಗುತ್ತವೆ. ಅವರು ಎದುರಿಸುತ್ತಿರುವ ಸಮಸ್ಯೆಗಳು ಬೇರೆಬೇರೆ ಅಷ್ಟೆ.

ಹಿಂಸಾಚಾರದ ನಂತರ ಕುಕಿ ಸಮುದಾಯಕ್ಕೆ ಸೇರಿದ ಪತಿಯಿಂದ ದೂರವಾಗಿರುವ ಮೈತೇಯಿ ಮಹಿಳೆ ಇಂಫಾಲ್‌ನ ಇಮಾ ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ –ಪಿಟಿಐ ಚಿತ್ರ 
ಹಿಂಸಾಚಾರದ ನಂತರ ಕುಕಿ ಸಮುದಾಯಕ್ಕೆ ಸೇರಿದ ಪತಿಯಿಂದ ದೂರವಾಗಿರುವ ಮೈತೇಯಿ ಮಹಿಳೆ ಇಂಫಾಲ್‌ನ ಇಮಾ ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ –ಪಿಟಿಐ ಚಿತ್ರ 
ತಿಂಗಳಲ್ಲಿ ಒಂದು ಬಾರಿ ನನ್ನ ಮಕ್ಕಳನ್ನು ಭೇಟಿ ಮಾಡುತ್ತೇನೆ. ಬದುಕುಳಿಯುವುದು ಹಾಗೂ ತಾಯಿಯ ಪ್ರೀತಿ ಇವೆರಡರ ಪೈಕಿ ಒಂದನ್ನು ನಾವು ಆಯ್ದುಕೊಳ್ಳಬೇಕಿದೆ
ಐರೀನ್‌ ಹವೋಕಿಪ್‌ ಕುಕಿ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT