ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ ಪ್ರಕರಣ | ‘ಪೊಲೀಸರೇ ವಾಹನದಲ್ಲಿ ಕರೆತಂದಿದ್ದರು...‘

ಮಣಿಪುರದಲ್ಲಿ ಮಹಿಳೆ ಬೆತ್ತಲಾಗಿಸಿದ್ದ ಪ್ರಕರಣ * ಸಿಬಿಐ ದೋಷಾರೋಪ ಪಟ್ಟಿ
Published 30 ಏಪ್ರಿಲ್ 2024, 16:19 IST
Last Updated 30 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದಲ್ಲಿ ಆಶ್ರಯ ಕೋರಿದ್ದ ಕುಕಿ–ಜೊಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಪೊಲೀಸರೇ, ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಮೈತೇಯಿ ಗಲಭೆಕೋರರ ನಡುವೆ ಅಧಿಕೃತ ಜಿಪ್ಸಿ ವಾಹನದಲ್ಲಿ ಕರೆತಂದಿದ್ದರು ಎಂದು ಸಿಬಿಐ ಹೇಳಿದೆ.

ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ಸಂಬಂಧ ಕಂಗ್‌ಪೊಕ್ಪಿ ಜಿಲ್ಲೆಯಲ್ಲಿ ಇದೇ ಇಬ್ಬರು ಮಹಿಳೆಯರನ್ನು, ಅತ್ಯಾಚಾರದ ಬಳಿಕ ಬೆತ್ತಲಾಗಿಸಿ ಮೆರವಣಿಗೆ ನಡೆಸಲಾಗಿತ್ತು ಎಂದು ಸಿಬಿಐ ಈ ಕುರಿತು ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.

ಉದ್ರಿಕ್ತರ ಗುಂಪು, ಇದೇ ಕುಟುಂಬದ ಮೂರನೇ ಮಹಿಳೆ ಮೇಲೂ ತೀವ್ರ ಹಲ್ಲೆ ನಡೆಸಿದ್ದು, ಬೆತ್ತಲುಗೊಳಿಸಲು ಯತ್ನಿಸಿದೆ. ಆದರೆ ಮಹಿಳೆ ತನ್ನ ಮೊಮ್ಮಗಳನ್ನು ಬಿಗಿಯಾಗಿ ಹಿಡಿದಿದ್ದ ಕಾರಣ ಉದ್ರಿಕ್ತರ ಯತ್ನ ಈಡೇರಿಲ್ಲ. ಆಕೆ ತಪ್ಪಿಸಿಕೊಂಡಿದ್ದು, ಇನ್ನಿಬ್ಬರ ಮಹಿಳೆಯರನ್ನು ಗುರಿಯಾಗಿಸಿ ಉದ್ರಿಕ್ತರ ಗುಂಪು ಅನುಚಿತವಾಗಿ ವರ್ತಿಸಿತು ಎಂದು ಸಿಬಿಐ ತಿಳಿಸಿದೆ.

ಸ್ಥಳದಲ್ಲಿದ್ದ ಪೊಲೀಸರಿಗೆ ನೆರವು ನೀಡುವಂತೆ ಮೂವರು ಮಹಿಳೆಯರು ಕೋರಿದ್ದರು. ಆದರೆ, ಪೊಲೀಸರು ಸ್ಪಂದಿಸಿಲ್ಲ ಎಂದು ದೋಷಾರೋಪ ಪಟ್ಟಿಯಲ್ಲಿ  ಆರೋಪಿಸಲಾಗಿದೆ.

ಮಹಿಳೆಯರ ಪೈಕಿ ಒಬ್ಬರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧರ ಪತ್ನಿ. ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಕೋರಿದ್ದರು. ಆದರೆ, ನಮ್ಮ ಬಳಿ ವಾಹನದ ಕೀ ಇಲ್ಲ ಎಂದು ಅವರಿಗೆ ತಿಳಿಸಲಾಯಿತು ಎಂದು ಆರೋಪಪಟ್ಟಿಯಲ್ಲಿ ಸಿಬಿಐ ಹೇಳಿದೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಉದ್ರಿಕ್ತರ ಗುಂಪು ಬೆತ್ತಲಾಗಿಸಿ ಮೆರವಣಿಗೆ ನಡೆಸಿದ್ದ ಕೃತ್ಯವು ಕಳೆದ ವರ್ಷ ಮೇ 4ರಂದು ನಡೆದಿದ್ದು, ಎರಡು ತಿಂಗಳ ತರುವಾಯ ಜುಲೈನಲ್ಲಿ ಸಂಬಂಧಿತ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT