ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Manipur Violence | 6ಕ್ಕೆ ಮೈತೇಯಿ ಹೋರಾಟ

Published 30 ಜುಲೈ 2023, 23:41 IST
Last Updated 30 ಜುಲೈ 2023, 23:41 IST
ಅಕ್ಷರ ಗಾತ್ರ

ಗುವಾಹಟಿ: ಮಣಿಪುರದಿಂದ ದೇಶದ ರಾಜಧಾನಿವರೆಗೆ ವಿಸ್ತರಿಸಿರುವ ಚಿನ್‌–ಕುಕಿ ಸಮುದಾಯಕ್ಕೆ ಸೇರಿದ ಮಾದಕ ವಸ್ತುಗಳ ಕಳ್ಳಸಾಗಣೆದಾರರ ವಿರುದ್ಧ ಹೋರಾಟ ನಡೆಸಲು ಮೈತೇಯಿ ಸಂಘಟನೆಗಳು ನಿರ್ಧರಿಸಿವೆ.

ಶನಿವಾರ ಮಣಿಪುರದಲ್ಲಿ ಈ ಸಮುದಾಯದಿಂದ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆದಿತ್ತು. ಈ ಹೋರಾಟವನ್ನು ದೆಹಲಿಗೆ ವಿಸ್ತರಿಸಲು ಮಣಿಪುರ ಏಕತೆ ಸಂಯೋಜನಾ ಸಮಿತಿ (ಸಿಒಸಿಒಎಂಐ) ಹಾಗೂ ಮಣಿಪುರ–ದೆಹಲಿ ಸಂಯೋಜನಾ ಸಮಿತಿ ತೀರ್ಮಾನಿಸಿವೆ. ಹಾಗಾಗಿ, ಆಗಸ್ಟ್‌ 6ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಒಂದು ವಾರದ ಕಾಲ ಧರಣಿ ನಡೆಯಲಿದೆ.

ಕಣಿವೆ ರಾಜ್ಯದಲ್ಲಿ ಬೇರೂರಿರುವ ಈ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿರುವ ಸಮಿತಿಗಳು, ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬಾರದೆಂದು ಆಗ್ರಹಿಸಲಾಗುವುದು ಎಂದು ತಿಳಿಸಿವೆ.

ಕುಕಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಗೆ ರೂಪಿಸಿದ್ದ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ. ಭಾರತ–ಮ್ಯಾನ್ಮರ್‌ ಗಡಿ ಭಾಗದ ಭದ್ರತೆಗೆ ಅಸ್ಸಾಂ ರೈಫಲ್ಸ್‌ ಬದಲಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರತ್ಯೇಕ ಪಡೆ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿವೆ.

ಆರೋಪ ಏನು?: ಚಿನ್‌–ಕುಕಿ ಬಂಡುಕೋರರು ಮತ್ತು ನೆರೆಯ ಮ್ಯಾನ್ಮರ್‌ ಭಯೋತ್ಪಾದಕರು ಕುಕಿ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಅಫೀಮು ಉತ್ಪಾದನೆಗೆ ಬಳಸುವ ಗಸಗಸೆ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಮೈತೇಯಿ ಸಮುದಾಯ ಆರೋಪಿಸಿದೆ.

ಅಕ್ರಮ ವಲಸಿಗರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರವು ತೆರವು ಕಾರ್ಯಾ
ಚರಣೆ ಕೈಗೊಂಡಿತು. ಬಳಿಕ ಗಸಗಸೆ ಕೃಷಿ ಚಟುವಟಿಕೆಗೂ ಕಡಿವಾಣ ಹಾಕಲು ಮುಂದಾಯಿತು. ಆ ಬಳಿಕ ನಮ್ಮ ಮೇಲೆ ಕುಕಿ ಜನರಿಂದ ದಾಳಿ ಹೆಚ್ಚಿದೆ ಎಂದು ಮೈತೇಯಿ ಜನರು ದೂರುತ್ತಾರೆ.  

ಅಫೀಮು ತಯಾರಿಕೆಯಲ್ಲಿ ನಾವು ತೊಡಗಿಕೊಂಡಿಲ್ಲ. ಮೈತೇಯಿ ಸಮುದಾಯ ಮತ್ತು ಮಣಿಪುರ ಸರ್ಕಾರವು ನಮಗೆ ಅಕ್ರಮ ವಲಸಿಗರ ಪಟ್ಟ ಕಟ್ಟಲು ಹೊರಟಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಹುನ್ನಾರ ನಡೆದಿದೆ ಎಂಬುದು ಕುಕಿ ಸಮುದಾಯದ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT