ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಹಿಂಸಾಚಾರ: ಪ್ರಧಾನಿ ಜೊತೆ ಮಾತುಕತೆಗೆ ಸರ್ವಪಕ್ಷಗಳ ಪಟ್ಟು

Published 17 ಜೂನ್ 2023, 14:17 IST
Last Updated 17 ಜೂನ್ 2023, 14:17 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಮೌನವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪ್ರಶ್ನಿಸಿರುವ ಸರ್ವಪಕ್ಷಗಳ ನಾಯಕರು, ಮಾತುಕತೆಗೆ ಸಮಯಾವಕಾಶ ನಿಗದಿಪಡಿಸುವಂತೆ ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್‌, ಜೆಡಿ(ಯು), ಎಎಪಿ, ಸಿಪಿಐ, ಸಿಪಿಎಂ, ಫಾರ್ವಡ್‌ ಬ್ಲಾಕ್, ಆರ್‌ಎಸ್‌ಪಿ, ಶಿವಸೇನಾ(ಯುಬಿಟಿ) ಮತ್ತು ಎನ್‌ಸಿಪಿ ನಾಯಕರು ಜೂನ್‌ 10ರಂದು ಮಾತುಕತೆಗೆ ಸಮಯಾವಕಾಶ ಕೋರಿದ್ದರು. ಆದರೆ, ಮೋದಿ ಅವಕಾಶ ನೀಡಿಲ್ಲ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಾಯಕರು, ‘2001ರಲ್ಲಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಮಣಿಪುರದ ಸರ್ವಪಕ್ಷಗಳ ನಿಯೋಗದ ಜೊತೆಗೆ ಮಾತನಾಡಿದ್ದರು. ಅವರ ಹಾದಿಯನ್ನೇ ಮೋದಿ ಕೂಡ ತುಳಿಯಬೇಕಿದೆ’ ಎಂದು ಸಲಹೆ ನೀಡಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್‌ ರಮೇಶ್‌, ‘ಅಮೆರಿಕಕ್ಕೆ ತೆರಳುವ ಮೊದಲು ಮೋದಿ ಅವರು ಮಾತುಕತೆಗೆ ಆಹ್ವಾನಿಸಲಿದ್ದಾರೆ ಎಂಬ ವಿಶ್ವಾಸ ಸರ್ವಪಕ್ಷಗಳ ನಿಯೋಗಕ್ಕಿದೆ’ ಎಂದರು.

‘ಮೋದಿ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಜೂನ್‌ 21ರಂದು ಯೋಗ ದಿನಾಚರಣೆ ಮೂಲಕ ವಿಶ್ವವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಆದರೆ, ಮಣಿಪುರ ಹಿಂಸಾಚಾರದ ಬಗ್ಗೆ ಮಾತುಕತೆ ನಡೆಸಲು ಅಥವಾ ಮಾತನಾಡಲು ಅವರಿಗೆ ಸಮಯವೇ ಇಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಮತ್ತು ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಟೀಕಿಸಿದರು.  

ಪರಿಸ್ಥಿತಿ ನಿಯಂತ್ರಿಸುವಲ್ಲಿ ಮಣಿಪುರ ಸರ್ಕಾರ ಸೋತಿದೆ. ಅಲ್ಲಿಗೆ ಅಮಿತ್‌ ಶಾ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಮಣಿಪುರದ ಮಾಜಿ ಮುಖ್ಯಮಂತ್ರಿ ಓ ಇಬೋಬಿ ಸಿಂಗ್ ಮಾತನಾಡಿ, ‘ಜನರಿಗೆ ಶಾಂತಿ ಕಾಪಾಡುವಂತೆ ಟ್ವೀಟ್‌ ಮೂಲಕವಾದರೂ ಮೋದಿ ಮನವಿ ಮಾಡಬೇಕು’ ಎಂದು ಆಗ್ರಹಿಸಿದರು.

‘ನಾವು ಶಾಂತಿಯನ್ನಷ್ಟೇ ಬಯಸುತ್ತೇವೆ. ರಾಜಕೀಯ ಲಾಭ ಅಥವಾ ರಾಜಕಾರಣದ ಬಗ್ಗೆ ಮಾತನಾಡಲು ಇಲ್ಲಿಗೆ(ದೆಹಲಿ) ಬಂದಿಲ್ಲ. ಸಂಘರ್ಷದ ನೆಲದಲ್ಲಿ ಶಾಂತಿ ‍ಪುನರ್‌ ಸ್ಥಾಪನೆಯಾಗಬೇಕಿದೆ. ಅದಕ್ಕಾಗಿ ವಾಜಪೇಯಿ ನಡೆಯನ್ನು ಮೋದಿಯೂ ಪಾಲಿಸಬೇಕಿದೆ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT