ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಮನಮೋಹನ್‌ 33 ವರ್ಷಗಳ ಅವಧಿಗೆ ಏಪ್ರಿಲ್‌ನಲ್ಲಿ ತೆರೆ

Published 14 ಫೆಬ್ರುವರಿ 2024, 16:23 IST
Last Updated 14 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯ ಸದಸ್ಯರಾಗಿ 33 ವರ್ಷಗಳ ಸುದೀರ್ಘ ಅವಧಿಯನ್ನು ಏಪ್ರಿಲ್‌ ಮೊದಲ ವಾರದಲ್ಲಿ ಕೊನೆಗೊಳಿಸಲಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಇದೇ ಮೊದಲ ಬಾರಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. 

ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್‌, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ನರಸಿಂಹರಾವ್‌ ಅವರ ಸರ್ಕಾರದಲ್ಲಿ (1991 ರಿಂದ 1996) ಹಣಕಾಸು ಸಚಿವರಾಗಿದ್ದ ಅವರು 2004 ರಿಂದ 2014ರ ವರೆಗೆ ಪ್ರಧಾನಿಯಾಗಿದ್ದರು.

91 ವರ್ಷದ ಸಿಂಗ್‌ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ‍್ರಿಲ್‌ 3ಕ್ಕೆ ಕೊನೆಗೊಳ್ಳಲಿದೆ. ಸೋನಿಯಾ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದು, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. 

2019ರಲ್ಲಿ ಎರಡು ತಿಂಗಳು ಹೊರತುಪಡಿಸಿ, ರಾಜ್ಯಸಭೆಯಲ್ಲಿ ಸಿಂಗ್‌ ಅವರ 33 ವರ್ಷಗಳ ಅವಧಿ ನಿರಂತರವಾಗಿತ್ತು. 1991ರ ಅಕ್ಟೋಬರ್‌ 1 ರಿಂದ 2019ರ ಜೂನ್‌ 14ರ ವರೆಗಿನ ಅವಧಿಯಲ್ಲಿ ಅವರು ಸತತ ಐದು ಸಲ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ ಅವರು ರಾಜಸ್ಥಾನದಿಂದ (2019ರ ಆಗಸ್ಟ್‌ 20 ರಂದು) ಆಯ್ಕೆಯಾಗಿದ್ದರು.  

1999ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್, ಬಿಜೆಪಿಯ ವಿಜಯ್‌ ಕುಮಾರ್‌ ಮಲ್ಜೋತ್ರ ಎದುರು ಸೋತಿದ್ದರು.

ಸೋನಿಯಾ ಅವರು ಗಾಂಧಿ ಕುಟುಂಬದಿಂದ ರಾಜ್ಯಸಭೆ ಪ್ರವೇಶಿಸಲಿರುವ ಎರಡನೇ ವ್ಯಕ್ತಿ ಎನಿಸಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಎರಡೂವರೆ ವರ್ಷ (1964ರ ಆಗಸ್ಟ್‌ನಿಂದ 1967ರ ಫೆಬ್ರುವರಿ) ರಾಜ್ಯಸಭೆ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT