ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸತ್‌ ಭವನ ಸಿದ್ಧಗೊಂಡರೂ ಹಳೇ ಭವನದಲ್ಲೇ ಮುಂಗಾರು ಅಧಿವೇಶನ; ಕಾರಣ ಇಲ್ಲಿದೆ

Published 27 ಜುಲೈ 2023, 8:58 IST
Last Updated 27 ಜುಲೈ 2023, 8:58 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡಿದೆ. ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಬಹಳಷ್ಟು ಮಸೂದೆಗಳು ಚರ್ಚೆಗೆ ಸಜ್ಜಾಗಿವೆ. 1927ರಲ್ಲಿ ಬ್ರಿಟಿಷರು ನಿರ್ಮಿಸಿದ ಹಳೆಯ ಸಂಸತ್ ಭವನ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಲಿದೆ. ಆದರೆ ಕಳೆದ ಮೇ 28ರಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದಲ್ಲಿ ಈ ಬಾರಿಯ ಸಂಸತ್ ಕಲಾಪ ಏಕೆ ನಡೆಯುತ್ತಿಲ್ಲ ಎಂಬ ಚರ್ಚೆ ನಡೆದಿದೆ.

ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣ 2020ರ ಡಿಸೆಂಬರ್‌ನಲ್ಲಿ ಆರಂಭಗೊಂಡಿತು . ಮೇ 28ರಂದು ಉದ್ಘಾಟನೆಗೊಂಡ ಈ ಕಟ್ಟಡದಲ್ಲೇ ಈ ಬಾರಿಯ ಮುಂಗಾರು ಅಧಿವೇಶನ ಆರಂಭವಾಗುತ್ತದೆ ಎಂದೆನ್ನಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಹಳೇ ಕಟ್ಟಡದಲ್ಲೇ ಕಲಾಪ ನಡೆಸಲಾಗುವುದು ಎಂದು ತಿಳಿಸಿತು. ಇನ್ನೂ ಒಂದಷ್ಟು ಅಗತ್ಯ ಕಾಮಗಾರಿಗಳು ನಡೆಯಬೇಕಿದೆ ಎಂಬ ಕಾರಣವನ್ನೂ ಕೇಂದ್ರ ನೀಡಿತು.

ಮುಂಗಾರು ಅಧಿವೇಶನಕ್ಕೂ ಪೂರ್ವದಲ್ಲಿ ನೂತನ ಕಟ್ಟಡದ ಧ್ವನಿವರ್ಧಕ ವ್ಯವಸ್ಥೆ, ಹವಾನಿಯಂತ್ರಿತ ಸಾಧನ, ಸ್ವಯಂಚಾಲಿತ ಭದ್ರತಾ ವ್ಯವಸ್ಥೆಯ ಪರಿಶೀಲನೆಗಳು ನಡೆದಿದ್ದವು. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿನ ಆಡಿಯೊ ಮತ್ತು ವಿಡಿಯೊ ವ್ಯವಸ್ಥೆಯನ್ನೂ ತಂತ್ರಜ್ಞರು ಪರೀಕ್ಷಿಸಿದ್ದರು. ಆದರೆ ಹಳೇ ಕಟ್ಟಡದಿಂದ ಒಂದಷ್ಟು ಅಗತ್ಯ ವಸ್ತುಗಳ ಸ್ಥಳಾಂತರ ಕಾರ್ಯ ಪೂರ್ಣಗೊಂಡಿರಲಿಲ್ಲ. ಕಟ್ಟಡಕ್ಕೆ ಅಂತಿಮ ಸ್ಪರ್ಶ ನೀಡುವ ಇನ್ನೂ ಒಂದಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಈ ಕಾರಣಕ್ಕಾಗಿ ಕಲಾಪವನ್ನು ಹಳೇ ಕಟ್ಟಡದಲ್ಲೇ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ನೂತನ ಸಂಸತ್ ಭವನದ ಭದ್ರತಾ ತಪಾಸಣಾ ಸಾಧನಗಳ ತಂತ್ರಾಂಶಗಳ ಮರುಪರಿಶೀಲನೆ ಹಾಗೂ ಪರೀಕ್ಷೆಗಳು ನಡೆಯುತ್ತಿರುವ ಕಾರಣದಿಂದಲೂ ಹಳೆಯ ಸಂಸತ್ ಭವನದಲ್ಲೇ ಕಲಾಪ ಮುಂದುವರಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಮಂತ್ರಾಲಯ ಹೇಳಿದೆ.

ನೂತನ ಸಂಸತ್ ಭವನದಲ್ಲಿ ಕಲಾಪ ನಡೆಸದಿರಲು ಪ್ರವಾಹ ಪರಿಸ್ಥಿತಿಯೇ ಕಾರಣ. ನೂತನ ಸಂಸತ್‌ ಭವನವೂ ನೆರೆಪೀಡಿತವಾಗಿದೆ ಎಂದು ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಸಂಸದ ಹನುಮಾನ್ ಬನಿವಾಲ್‌ ಆರೋಪಿಸಿದ್ದರು. ಆದರೆ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಲ್ಹಾದ ಜೋಶಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಕಲಾಪ ಎಲ್ಲಿ ನಡೆಯಬೇಕು ಎಂದು ತೀರ್ಮಾನಿಸಿದ್ದು ಲೋಕಸಭಾ ಸ್ಪೀಕರ್‌ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಾರಿಯ ಮುಂಗಾರು ಸಂಸತ್ ಕಲಾಪ ಜುಲೈ 20ರಿಂದ ಆರಂಭಗೊಂಡಿದೆ. ಆ. 11ರವರೆಗೂ ಇದು ಮುಂದುವರಿಯಲಿದೆ. ಈ 23 ದಿನಗಳಲ್ಲಿ 17 ಸಭೆಗಳು ನಡೆಯಲಿವೆ. ಲೋಕಸಭಾ ಹಾಗೂ ರಾಜ್ಯ ಸಭಾ ಕಲಾಪಗಳು ಹಳೆಯ ಕಟ್ಟಡದಲ್ಲೇ ಮುಂದುವರಿಯುತ್ತಿವೆ. ಹೊಸ ಕಟ್ಟಡದಲ್ಲಿ ಕಾರ್ಯಕಲಾಪಗಳು ಎಂದಿನಿಂದ ಕಾರ್ಯಾರಂಭ ಮಾಡಲಿವೆ ಎಂಬುದನ್ನು ಸರ್ಕಾರ ಇನ್ನಷ್ಟೇ ಹೇಳಬೇಕಿದೆ.

ಮೇ 28ರಂದು ನಡೆದ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭವು ವೇದ ಮಂತ್ರಘೋಷಗಳೊಂದಿಗೆ ವಿದ್ಯುಕ್ತವಾಗಿ ನೇರವೇರಿತು. ತ್ರಿಕೋನಾಕಾರದ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ಹಳೆಯ ಕಟ್ಟಡದ ಪಕ್ಕದಲ್ಲೇ ಇದೆ. ಹಳೆಯ ಕಟ್ಟಡದಲ್ಲಿ ಒಟ್ಟು ಮೂರು ಸಭಾಂಗಣಗಳಿದ್ದವು. ನೂತನ ಕಟ್ಟಡದಲ್ಲಿ ಎರಡು ಸಭಾಂಗಣಗಳಿವೆ. ಒಂದು ಲೋಕಸಭೆಗೆ ಹಾಗೂ ಮತ್ತೊಂದು ರಾಜ್ಯ ಸಭೆಗೆ. ವಿಶೇಷ ಸಂದರ್ಭಗಳಲ್ಲಿ ಜಂಟಿ ಸಮಾವೇಶ ನಡೆಸಿದರೆ ಅದು ಲೋಕಸಭೆಯಲ್ಲೇ ನಡೆಯಲಿದೆ. ಇಲ್ಲಿ 1272 ಜನಕ್ಕೆ ಆಸನ ವ್ಯವಸ್ಥೆ ಇದೆ. 

2,11,614 ಚದರಡಿ ವಿಸ್ತೀರ್ಣದ ನೂತನ ಸಂಸತ್ ಭವನ ₹800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT