ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.20 ರಂದು ಮುಂಬೈನಲ್ಲಿ ಪ್ರತಿಭಟನೆ: ಮನೋಜ್‌ ಜರಾಂಗೆ

ಮರಾಠ ಮೀಸಲಾತಿಗೆ ಬದ್ಧ: ಸರ್ಕಾರ ಪುನರುಚ್ಚಾರ
Published 24 ಡಿಸೆಂಬರ್ 2023, 13:07 IST
Last Updated 24 ಡಿಸೆಂಬರ್ 2023, 13:07 IST
ಅಕ್ಷರ ಗಾತ್ರ

ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಬದ್ಧ ಎಂಬುದನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರ ಭಾನುವಾರ ಪುನರುಚ್ಚರಿಸಿದೆ. 

ಇದೇ ವೇಳೆ, ಮೀಸಲಾತಿಗೆ ಆಗ್ರಹಿಸಿ ಮುಂಬೈನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯು ‘ಹಿಂದೆಂದೂ ಕಾಣದಂತಹ’ ಹೋರಾಟವಾಗಿರಲಿದೆ ಎಂದು ಹೋರಾಟಗಾರ ಮನೋಜ್‌ ಜರಾಂಗೆ ಪಾಟೀಲ ಎಚ್ಚರಿಸಿದ್ದಾರೆ.

ಜರಾಂಗೆ ಅವರು ಜಲ್ನಾ ಜಿಲ್ಲೆಯ ಅಂಬಡ ತಾಲ್ಲೂಕಿನ ಅಂತರವಾಲಿ–ಸರಾಟಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೀಸಲಾತಿಗೆ ಆಗ್ರಹಿಸಿ ಮೂರನೇ ಹಂತದ  ಉಪವಾಸ ಸತ್ಯಾಗ್ರಹವನ್ನು ಮುಂದಿನ ವರ್ಷ ಜನವರಿ 20 ರಂದು ಆರಂಭಿಸುವುದಾಗಿ ಅವರು ಈಚೆಗೆ ಪ್ರಕಟಿಸಿದ್ದರು.

‘ಜನವರಿ 20ಕ್ಕೆ ಮುನ್ನ ನಾನು ಯಾವುದೇ ಮಾತುಕತೆಗೂ ಸಿದ್ಧ. ಆದರೆ ಜ.20 ರಂದು ಈ ಸ್ಥಳವನ್ನು (ಅಂತರವಾಲಿ– ಸರಾಟಿ) ತೊರೆದ ಬಳಿಕ ನನ್ನ ಮುಂದಿರುವ ಗುರಿ ಪ್ರತಿಭಟನೆ ಮಾತ್ರ.  ಉಪವಾಸ ಸತ್ಯಾಗ್ರಹ ಮತ್ತೆ ಆರಂಭಿಸುತ್ತೇನೆ’ ಎಂದು ಹೇಳಿದರು.

ಮರಾಠರಿಗೆ ಮೀಸಲಾತಿ ನೀಡುವ ಕುರಿತು ಡಿಸೆಂಬರ್‌ 24ರೊಳಗೆ ತೀರ್ಮಾನಿಸಬೇಕು ಎಂದು ಜರಾಂಗೆ ಈ ಮೊದಲು ಗಡುವು ವಿಧಿಸಿದ್ದರು. ಬಳಿಕ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಗಡುವನ್ನು ಜ.20ರ ವರೆಗೆ ವಿಸ್ತರಿಸಿದ್ದರು.

‘ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರು ಜ.20 ರಂದು ಮುಂಬೈನಲ್ಲಿ ಸೇರಲಿದ್ದಾರೆ. ಮರಾಠ ಸಮುದಾಯದ 3 ಕೋಟಿ ಮಂದಿ ಸೇರುವ ನಿರೀಕ್ಷೆಯಿದೆ. ಮುಂಬೈನ ಇತಿಹಾಸದಲ್ಲೇ ಅತಿದೊಡ್ಡ ಪ್ರತಿಭಟನೆ ಎನಿಸಿಕೊಳ್ಳಲಿದೆ’ ಎಂದರು.

ಸರ್ಕಾರ ಬದ್ಧ: ‘ಮರಾಠರಿಗೆ ಮೀಸಲಾತಿ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಫೆಬ್ರುವರಿಯಲ್ಲಿ ಮುಂಬೈನಲ್ಲಿ ವಿಶೇಷ ಅಧಿವೇಶನ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

‘ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗವು ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ತನ್ನ ವರದಿ ಸಲ್ಲಿಸಲಿದೆ. ಮರಾಠ ಸಮುದಾಯವು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT