ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್​ಪಿಗೆ ತನ್ನ ಸೋದರಳಿಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಮಾಯಾವತಿ

Published 10 ಡಿಸೆಂಬರ್ 2023, 8:28 IST
Last Updated 10 ಡಿಸೆಂಬರ್ 2023, 8:28 IST
ಅಕ್ಷರ ಗಾತ್ರ

ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್‌ ಆನಂದ್‌ ಅವರನ್ನು ರಾಜಕೀಯ ಉತ್ತರಾಧಿಕಾರಿಯನ್ನಾಗಿ ಭಾನುವಾರ ಘೋಷಿಸಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕಾಶ್‌ ಅವರು ಈಗ ಬಿಎಸ್‌ಪಿ ರಾಷ್ಟ್ರೀಯ ಸಂಚಾಲಕ ಆಗಿದ್ದಾರೆ.

‘ಲಖನೌದಲ್ಲಿ ನಡೆದ ಅಖಿಲ ಭಾರತ ಬಿಎಸ್‌ಪಿ ಸಭೆಯಲ್ಲಿ ಮಾಯಾವತಿ ಅವರು ಈ ನಿರ್ಧಾರ ಪ್ರಕಟಿಸಿದರು. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಿದರೆ ಪಕ್ಷವು ದುರ್ಬಲವಾಗಿರುವ ಬೇರೆಲ್ಲ ಕಡೆ ಸಂಘಟನೆಯನ್ನು ಸದೃಢವಾಗಿಸುವ ಜವಾಬ್ದಾರಿಯನ್ನು ಆಕಾಶ್‌ ಅವರಿಗೆ ನೀಡಲಾಗಿದೆ’ ಎಂದು ಶಹಜಹಾನ್‌ಪುರ ಜಿಲ್ಲಾ ಬಿಎಸ್‌ಪಿ ಘಟಕದ ಮುಖ್ಯಸ್ಥ ಉದಯ್‌ವೀರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಈ ಬೆಳವಣಿಗೆಯನ್ನು ಬಿಎಸ್‌ಪಿ ವಿಧಾನ ಪರಿಷತ್‌ ಸದಸ್ಯ ಭೀಮ್‌ರಾವ್‌ ಅಂಬೇಡ್ಕರ್‌ ಅವರು ಕೂಡ ದೃಢಪಡಿಸಿದ್ದಾರೆ. ‘ಆಕಾಶ್‌ ಆನಂದ್‌ ಮೂಲಕ ನಮಗೆ ಯುವ ನಾಯಕ ದೊರಕಿದ್ದಾರೆ. ಪಕ್ಷವು ದುರ್ಬಲವಾಗಿರುವ ರಾಜ್ಯಗಳಲ್ಲಿ ಆಕಾಶ್‌ ಅವರು ಪಕ್ಷ ಬಲಪಡಿಸುವ ಕೆಲಸ ಮಾಡಲಿದ್ದಾರೆ’ ಎಂದರು.

ಈ ಬೆಳವಣಿಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಉತ್ತರಪ್ರದೇಶ ಘಟಕದ ಮುಖ್ಯಸ್ಥ ವಿಶ್ವನಾಥ್‌ ಪಾಲ್ ಅವರು, ‘ಸಂಪೂರ್ಣ ಬಹುಜನ ಸಮುದಾಯವೇ ಸಂತೋಷಪಟ್ಟಿದೆ’ ಎಂದರು. ಆದರೆ, ಪಕ್ಷದ ಅಧಿಕೃತ ಪ್ರಕಟಣೆಯಲ್ಲಿ ಉತ್ತರಾಧಿಕಾರಿ ಘೋಷಣೆ ಕುರಿತು ಮಾಹಿತಿ ನೀಡಿಲ್ಲ.

‘ನಮ್ಮ ಮತ, ಅವರ ಆಡಳಿತ’ ಎಂಬ ಶೋಷಣೆಯ ವ್ಯವಸ್ಥೆಯಿಂದ ಬಡವರು, ಹಿಂದುಳಿದವರು ಮತ್ತು ದೌರ್ಜನ್ಯಕ್ಕೊಳಗಾದ ವರ್ಗಗಳನ್ನು ಮುಕ್ತಗೊಳಿಸಬೇಕು. ಇದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಬಿಎಸ್‌ಪಿ ನೆಲೆಯನ್ನು ವಿಸ್ತರಿಸಬೇಕು ಎಂದು ಮಾಯಾವತಿ ಅವರು ‍ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಕುರಿತು ವಿವಿಧ ರಾಜ್ಯಗಳ ಹಿರಿಯ ಪದಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಅಂಬೇಡ್ಕರ್‌ವಾದಿ ಪಕ್ಷವಾದ ಬಿಎಸ್‌ಪಿಯು ಬಹುಜನ ಸಮಾಜದ ವಿವಿಧ ವರ್ಗಗಳನ್ನು ಬೆಸೆಯುವ ಮೂಲಕ ಈ ಸಮಾಜದ ರಾಜಕೀಯ ಶಕ್ತಿ ಹೆಚ್ಚಿಸಲು ಶ್ರಮಿಸುತ್ತಿದೆ. ಪಕ್ಷದ ಮುಖ್ಯ ಉದ್ದೇಶ ಅಧಿಕಾರದ ಕೀಲಿಕೈ ವಶಕ್ಕೆ ತೆಗೆದುಕೊಳ್ಳುವುದು. ರಾಷ್ಟ್ರ ಮತ್ತು ಸಾರ್ವಜನಿಕ ಹಿತಕ್ಕೆ ಬದಲಾಗಿ ಹಣಬಲ, ಆಕರ್ಷಕ ಭರವಸೆಗಳು ಮತ್ತು ಸಂಚು ರೂಪಿಸುವ ಮೂಲಕ ಅಸ್ತಿತ್ವ ಉಳಿಸಿಕೊಂಡಿರುವ ಪ್ರತಿಪಕ್ಷಗಳನ್ನು ಎದುರಿಸಲು ದುಪ್ಪಟ್ಟು ಶ್ರಮ ವ್ಯಯಿಸಿ’ ಎಂದು ಮಾಯಾವತಿ ಅವರು ಕಾರ್ಯಕರ್ತರಿಗೆ ಹೇಳಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಯಾವ ಮೈತ್ರಿಕೂಟವೂ ಬಹುಜನ ಚಳವಳಿಯ ಪಾಲಿಗೆ ಉತ್ತಮವಾಗಿಲ್ಲ ಎಂದಿರುವ ಮಾಯಾವತಿ ಅವರು, ಯಾವುದೇ ಮೈತ್ರಿಕೂಟದ ಜೊತೆ ಕೈಜೋಡಿಸುವುದಿಲ್ಲ ಎಂದು ಪುನರುಚ್ಚರಿಸಿದರು ಎನ್ನಲಾಗಿದೆ.

ಕಿರಿಯ ತಮ್ಮನ ಮಗ

ಆಕಾಶ್ ಆಕಾಶ್‌ ಆನಂದ್ ಅವರು ಮಾಯಾವತಿ ಅವರ ಕಿರಿಯ ಸಹೋದರ ಆನಂದ್‌ ಕುಮಾರ್‌ ಅವರ ಮಗ. ಲಂಡನ್‌ನ ಕಾಲೇಜೊಂದರಿಂದ ಎಂಬಿಎ ಪದವಿ ಪಡೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ ಆಕಾಶ್ ಅವರು ತಮ್ಮನ್ನು ‘ಬಾಬಾ ಸಾಹೇಬರ ದೃಷ್ಟಿಕೋನದ ಯುವ ಬೆಂಬಲಿಗ’ ಎಂದು ಹೇಳಿಕೊಂಡಿದ್ದಾರೆ. ಬಿಎಸ್‌ಪಿ ಶಾಸಕ  ಭೀಮ್‌ರಾವ್‌ ಅಂಬೇಡ್ಕರ್‌ ಅವರ ಪ್ರಕಾರ ಆಕಾಶ್ ಅವರಿಗೆ 27 ವರ್ಷ ವಯಸ್ಸು.

‘ಆಕಾಶ್ ಅವರು 2017ರಿಂದಲೂ ಬಿಎಸ್‌‍‍ಪಿ ಜೊತೆ ಗುರುತಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಕಾಶ್ ಅವರು ಆಗ್ರಾದಲ್ಲಿ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ್ದರು’ ಎಂದು ಅಂಬೇಡ್ಕರ್ ಹೇಳಿದ್ದಾರೆ.

2017ರಲ್ಲಿ ಸಹರಾನಪುರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರ ಮೂಲಕ ಮಾಯಾವತಿ ಅವರು ಆಕಾಶ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದರು. ಉತ್ತರ ಪ್ರದೇಶದ ರಾಜಕಾರಣದಲ್ಲಿ ಬಿಎಸ್‌ಪಿ ಶಕ್ತಿ ಕುಂದಿರುವ ಈ ಹೊತ್ತಿನಲ್ಲಿ ಆಕಾಶ್ ಅವರನ್ನು ಮಾಯಾವತಿ ಅವರು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. 

ದಲಿತ ನಾಯಕ ಮತ್ತು ಭೀಮ್‌ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ (ರಾವಣ್) ಅವರ ಪ್ರಭಾವವನ್ನು ಕುಗ್ಗಿಸುವ ಉದ್ದೇಶದಿಂದ ಆಕಾಶ್ ಅವರನ್ನು ಬಿಎಸ್‌ಪಿಯಲ್ಲಿ ಮುಖ್ಯ ಹುದ್ದೆಗೆ ತರಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ. ಚಂದ್ರಶೇಖರ್ ಅವರು ಮಾಯಾವತಿ ಅವರ ಮತಬ್ಯಾಂಕ್‌ಗೆ ಧಕ್ಕೆ ತಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.‌

‘ಆಕಾಶ್ ಅವರು ಯುವ ನಾಯಕ... ಅವರು ಜಾತಿಗಳ ಆಚೆಗೂ ಪ್ರಭಾವ ಹೊಂದಿದ್ದಾರೆ... ಅವರು ಯುವಕರನ್ನು ಪಕ್ಷದ ಕಡೆ ಸೆಳೆಯಬಲ್ಲರು’ ಎಂದು ಬಿಎಸ್‌ಪಿ ನಾಯಕ ಸುರೇಂದ್ರ ಸಿಂಗ್ ಹೇಳುತ್ತಾರೆ. ಆಕಾಶ್ ಅವರು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದರು. 2022ರ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಸಾಮಾಜಿಕ ಜಾಲತಾಣ ಅಭಿಯಾನದ ಮೇಲ್ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT