ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ವಿರೋಧ

Last Updated 19 ಜೂನ್ 2021, 11:23 IST
ಅಕ್ಷರ ಗಾತ್ರ

ಚೆನ್ನೈ: ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಅಲ್ಲದೆ, ಅಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ‘ಏಕಪಕ್ಷೀಯ’ ಎಂದೂ ಅವರು ಕರೆದಿದ್ದಾರೆ.

ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಕರ್ನಾಟಕವು ಯೋಜನೆ ಮುಂದುವರಿಸಲಿದೆ ಎಂಬ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಹೇಳಿಕೆ ವಿರುದ್ಧ ಪ್ರತಿಪಕ್ಷದ ನಾಯಕರೂ ಆಗಿರುವ ಎಐಎಡಿಎಂಕೆ ಸಹ ಸಂಯೋಜಕ ಕೆ. ಪಳನಿಸ್ವಾಮಿ ಕಿಡಿಕಾರಿದ್ದಾರೆ.

‘ಮೇಕೆಡಾಟು ಅಣೆಕಟ್ಟು ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂಬ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪ ಅವರು ಹೇಳಿಕೆಯು ಏಕಪಕ್ಷೀಯ. ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಕರ್ನಾಟಕ ಸರ್ಕಾರ ಈ ನಡೆ ಅನಸರಿಸುತ್ತಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಇದು ಖಂಡನೀಯ‘ ಎಂದು ಅವರು ಹೇಳಿದ್ದಾರೆ.

‘ಕರ್ನಾಟಕಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವಂಥದ್ದು. ಈ ಯೋಜನೆಗೆ ತಡೆ ಕೋರುವ ಅರ್ಜಿಯ ವಿಚಾರಣೆ ನಡೆಸಿದ ಎನ್.ಜಿ.ಟಿ ಇಂದು ರಾಜ್ಯದ ವಾದವನ್ನು ಮನ್ನಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ. ಆದಷ್ಟು ಶೀಘ್ರದಲ್ಲಿ ಎಲ್ಲ ಅನುಮತಿಗಳನ್ನು ಪಡೆದು ಯೋಜನೆ ಪ್ರಾರಂಭಿಸಲಾಗುವುದು,‘ ಎಂದು ಬಿಎಸ್‌ ಯಡಿಯೂರಪ್ಪ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದರು.

‘ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನವನ್ನು ತಮಿಳುನಾಡು ಸರ್ಕಾರ ಸ್ವಲ್ಪಮಟ್ಟಿಗೂ ಕೈಗೂಡದಂತೆ ಮಾಡಬೇಕು. ತಮಿಳುನಾಡು ರೈತರನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಈ ಮೂಲಕ ಈ ವಿಷಯದ ಬಗ್ಗೆ ರಾಜ್ಯದ ಹಕ್ಕುಗಳನ್ನು ರಕ್ಷಣೆ ಮಾಡಿದ್ದೆ. ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿನ ಕಾವೇರಿ ಕೊಳ್ಳವು ಮರುಭೂಮಿಯಾಗುತ್ತದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನೂ ದಾಖಲಿಸಿದ್ದೆ,‘ ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಕಾವೇರಿ ನದಿ ತಮಿಳುನಾಡಿನ ಹಲವಾರು ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸುತ್ತದೆ. ದಿವಂಗತ ಜೆ.ಜಯಲಲಿತಾ ಅವರ ಅವಧಿಯಲ್ಲಿ ಕಾವೇರಿ ವಿಚಾರದಲ್ಲಿನ ಅನೇಕ ಕಾನೂನು ಹೋರಾಟಗಳನ್ನು ತಮಿಳುನಾಡು ಗೆದ್ದಿದೆ ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನದಿ ನೀರು ನಿಯಂತ್ರಣ ಆಯೋಗವನ್ನು ಸ್ಥಾಪಿಸುವಲ್ಲಿ ಅಂದಿನ ಆಡಳಿತಾರೂಢ ಎಐಎಡಿಎಂಕೆ ಶ್ರಮಿಸಿದೆ ಎಂದು ಅವರು ನೆನಪಿಸಿಕೊಂಡರು.

ಜಯಲಲಿತಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ 2013 ರಲ್ಲಿ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಕೇಂದ್ರ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು.

ಮೇಕೆಡಾಟು ಅಣೆಕಟ್ಟು ಯೋಜನೆಗೆ ಪರಿಸರ ಅನುಮತಿ ನೀಡಬಾರದು ಎಂದು ಪ್ರಧಾನಮಂತ್ರಿಯನ್ನು ಕೋರಿದ್ದೇವೆ ಎಂದು ಪಳನಿಸ್ವಾಮಿ ಹೇಳಿದರು. ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಜಲಸಂಪನ್ಮೂಲ ಸಚಿವಾಲಯವು ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT