ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ, ಧರ್ಮಶ್ರದ್ಧೆಯಿದ್ದರೆ ಒಳ್ಳೆಯವನು ಎನ್ನಲಾಗದು: ಸುಪ್ರೀಂ ಕೋರ್ಟ್

Published 14 ಅಕ್ಟೋಬರ್ 2023, 17:38 IST
Last Updated 14 ಅಕ್ಟೋಬರ್ 2023, 17:38 IST
ಅಕ್ಷರ ಗಾತ್ರ

ನವದೆಹಲಿ: ಶಿಕ್ಷಣವಿದೆ ಮತ್ತು ದೇವರಲ್ಲಿ ಭಕ್ತಿ ಇದೆ ಎಂಬ ತನ್ನದೇ ಅಭಿ‍ಪ್ರಾಯದ ಆಧಾರದಲ್ಲಿ ವ್ಯಕ್ತಿಯೊಬ್ಬ ಒಳ್ಳೆಯವನು ಎಂದು ನ್ಯಾಯಾಲಯವು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ  ಕೋರ್ಟ್‌ ಹೇಳಿದೆ. 

ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪ ಹೊತ್ತ ಹರ್ವಿಂದರ್‌ ಸಿಂಗ್‌ ಅಲಿಯಾಸ್‌ ಬಚ್ಚು ಎಂಬಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹಿಮಾಚಲ ಪ್ರದೇಶದ ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.  

‘ವ್ಯಕ್ತಿಯು ಶಿಕ್ಷಣ ಪಡೆದ ಮಾತ್ರಕ್ಕೆ ಅಥವಾ ದೇವರ ಮೇಲೆ ಭಕ್ತಿ ಹೊಂದಿದ್ದಾನೆ ಎಂಬ ಅಂಶವನ್ನು ಪರಿಗಣಿಸಿ ಆತನ ಚಾರಿತ್ರ್ಯವನ್ನು ನಿರ್ಣಯಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.

ಸಾಕ್ಷಿಯಾಗಿದ್ದ ವ್ಯಕ್ತಿಯು ಒಳ್ಳೆಯವನು ಮತ್ತು ಸುಶಿಕ್ಷಿತ ಎಂಬ ಕಾರಣ ಕೊಟ್ಟು ಸಾಕ್ಷ್ಯಕ್ಕೆ ಹೈಕೋರ್ಟ್‌ ಮಾನ್ಯತೆ ನೀಡಿತ್ತು. ಆದರೆ, ಸಾಕ್ಷಿಯು ಸುಶಿಕ್ಷಿತ ಮತ್ತು ಒಳ್ಳೆಯವನಾಗಿದ್ದರೂ ಆತನ ನಡವಳಿಕೆ ಶಂಕಾಸ್ಪದವಾಗಿತ್ತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ವ್ಯಕ್ತಿಯು ನಡತೆಯನ್ನು ರೂಪಿಸಿಕೊಳ್ಳಬೇಕು ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳಬೇಕು. ನಡತೆಯ ಕಾರಣಕ್ಕೆ ಖ್ಯಾತಿ ದೊರೆಯಬಹುದು. ಆದರೆ, ಈ ಎರಡೂ ಭಿನ್ನ ವಿಷಯಗಳು ಎಂದು ಪೀಠವು ಹೇಳಿದೆ.

ವ್ಯಕ್ತಿಯೊಬ್ಬನ ಪ್ರಸಿದ್ಧಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಗ್ರಹಿಕೆಯು ತಪ್ಪಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ಆತ ಮಂಡಿಸಿದ ಪುರಾವೆಯನ್ನೂ ಸಮರ್ಪಕವಾಗಿ ಮರು ಪರಿಶೀಲನೆ ನಡೆಸಿಲ್ಲ ಎಂದು ಹೇಳಿದ ನ್ಯಾಯಪೀಠವು, ಸೂಕ್ತ ಪುರಾವೆ ಒದಗಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಹೇಳಿ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಪಾದಿತನನ್ನು ಖುಲಾಸೆಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT