ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿ ಕುರಿತು ಹಾರಿಕೆ ಉತ್ತರ: ‘ಕೇಂದ್ರ’ಕ್ಕೆ ನೋಟಿಸ್‌

ಆ್ಯಪ್‌ ರಚಿಸಿದವರ ಮಾಹಿತಿ ನೀಡದಕ್ಕೆ ಕೇಂದ್ರ ಮಾಹಿತಿ ಆಯೋಗದಿಂದ ಕ್ರಮ
Last Updated 28 ಅಕ್ಟೋಬರ್ 2020, 11:42 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದವರು ಯಾರು ಎಂಬ ಪ್ರಶ್ನೆಗೆ ‘ನುಣಚಿಕೊಳ್ಳುವ ಉತ್ತರ’ ನೀಡಿದ ಕಾರಣಕ್ಕೆ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಆರೋಗ್ಯ ಸೇತು ಆ್ಯಪ್‌ ಬಳಸಲಾಗಿತ್ತು. ಈ ಆ್ಯಪ್‌ ಮಾಹಿತಿಯನ್ನು ಆಧರಿಸಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿತ್ತು. ಸುತ್ತಮುತ್ತಲಿರುವ ಸೋಂಕಿತರ ಪತ್ತೆಗೆ ಹಾಗೂ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದೇವೆಯೇ ಎನ್ನುವುದನ್ನೂ ತಿಳಿದುಕೊಳ್ಳಲು ಲಕ್ಷಾಂತರ ಜನರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ರೈಲು, ಮೆಟ್ರೊದಲ್ಲಿ ಪ್ರಯಾಣದ ವೇಳೆ ಈ ಆ್ಯಪ್‌ ಅನ್ನು ಕಡ್ಡಾಯವಾಗಿ ಬಳಸಲು ಜನರಿಗೆ ಸರ್ಕಾರವು ಸೂಚಿಸಿತ್ತು.

ಆರೋಗ್ಯ ಸೇತು ವೆಬ್‌ಸೈಟ್‌ನಲ್ಲಿ,ಸಚಿವಾಲಯಗಳ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸುವ ‘ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌’(ಎನ್‌ಐಸಿ) ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಕುರಿತು ಮಾಹಿತಿ ಹಕ್ಕು ಮುಖಾಂತರ ಕೇಳಿದರೆ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಎನ್‌ಐಸಿ, ಎರಡೂ ಆ್ಯಪ್‌ ಅಭಿವೃದ್ಧಿಪಡಿಸಿದವರು ಯಾರು ಎಂದು ತಿಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿವೆ.

‘ಅಧಿಕಾರಿಗಳು ಈ ರೀತಿ ಮಾಹಿತಿ ನೀಡದೇ ಇರುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನೋಟಿಸ್‌ನಲ್ಲಿ ಆಯೋಗವು ಉಲ್ಲೇಖಿಸಿದೆ. ‘ಆ್ಯಪ್‌ ಅಭಿವೃದ್ಧಿಪಡಿಸಿದವರು ಯಾರು? ದಾಖಲೆಗಳು ಎಲ್ಲಿವೆ ಎನ್ನುವುದನ್ನು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ವಿವರಿಸಲು ಆಗಲಿಲ್ಲ. ಇದು ಅಸಂಬದ್ಧ’ ಎಂದು ಆಯೋಗ ಹೇಳಿದೆ. ಸಂಬಂಧಪಟ್ಟ ಅಧಿಕಾರಿಗಳು ನ.24ರಂದು ಆಯೋಗದ ಮುಂದೆ ಹಾಜರಾಗಬೇಕು ಎಂದು ಆಯೋಗವು ನೋಟಿಸ್‌ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಆರ್‌ಟಿಐ ಅರ್ಜಿಗೆ ಈ ರೀತಿ ಹಾರಿಕೆ ಉತ್ತರ ನೀಡಿರುವುದಕ್ಕೆ ಹಾಗೂ ಮಾಹಿತಿಯನ್ನು ಪಡೆಯುವುದಕ್ಕೆ ಅಡ್ಡಿಪಡಿಸಿರುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು’ ಎಂದು ನೋಟಿಸ್‌ನಲ್ಲಿ ಆಯೋಗವು ಪ್ರಶ್ನಿಸಿದೆ.

ಆ್ಯಪ್‌ ಅಭಿವೃದ್ಧಿಪಡಿಸಿದವರು ಯಾರು ಎನ್ನುವ ಮಾಹಿತಿ ಒದಗಿಸಲು ಸಚಿವಾಲಯಗಳು ವಿಫಲವಾಗಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸೌರವ್‌ ದಾಸ್‌ ಆಯೋಗಕ್ಕೆ ದೂರು ನೀಡಿದ್ದರು. ಆ್ಯಪ್‌ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಿದವರು ಯಾರು? ಇದಕ್ಕೆ ಒಪ್ಪಿಗೆ ನೀಡಿದ ದಾಖಲೆ, ಅಭಿವೃದ್ಧಿಪಡಿಸಿದ ಕಂಪನಿಗಳ ವಿವರ, ಆ್ಯಪ್‌ ಅಭಿವೃದ್ಧಿಗೆ ವೇಳೆ ಕೈಜೋಡಿಸಿದ ಸರ್ಕಾರಿ ಇಲಾಖೆಗಳು ಹಾಗೂ ವ್ಯಕ್ತಿಗಳ ವಿವರ ಹಾಗೂ ಈ ಸಂಬಂಧ ಇರುವ ದಾಖಲೆಗಳನ್ನು ದಾಸ್‌ ಮಾಹಿತಿ ಹಕ್ಕಿನ ಮುಖಾಂತರ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎನ್‌ಐಸಿ, ‘ಆ್ಯಪ್‌ ಅಭಿವೃದ್ಧಿಗೆ ಸಂಬಂಧಿಸಿದ ಪೂರ್ಣ ದಾಖಲೆಗಳು ಎನ್‌ಐಸಿ ಬಳಿ ಇಲ್ಲ’ ಎಂದು ತಿಳಿಸಿತ್ತು. ಮಾಹಿತಿ ತಂತ್ರಜ್ಞಾನ ಇಲಾಖೆ ಬಳಿ ಈ ಮಾಹಿತಿಯನ್ನು ಕೇಳಿದ ಸಂದರ್ಭದಲ್ಲಿ ಇದನ್ನು ‘ರಾಷ್ಟ್ರೀಯ ಇ–ಆಡಳಿತ ವಿಭಾಗ’ಕ್ಕೆ ವರ್ಗಾಯಿಸಲಾಗಿತ್ತು. ಇ–ಆಡಳಿತ ವಿಭಾಗವು ‘ಈ ವಿಷಯ ನಮ್ಮ ವಿಭಾಗಕ್ಕೆ ಸಂಬಂಧಪಟ್ಟಿಲ್ಲ’ ಎಂದು ಪ್ರತಿಕ್ರಿಯೆ ನೀಡಿತ್ತು. ಕೇಂದ್ರ ಮಾಹಿತಿ ಆಯೋಗವು ಇ–ಆಡಳಿತ ವಿಭಾಗಕ್ಕೂ ನೋಟಿಸ್‌ ನೀಡಿದೆ.

ಆ್ಯಪ್‌ ಕುರಿತು ಪ್ರಶ್ನಿಸಿದ್ದ ರಾಹುಲ್‌ ಗಾಂಧಿ: ‘ಆರೋಗ್ಯ ಸೇತು ಆ್ಯಪ್‌ ಮೇಲ್ವಿಚಾರಣೆ ಇಲ್ಲದೇ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಕಂಪನಿಗೆ ಇದರ ಕಾರ್ಯಾಚರಣೆಯನ್ನು ವಹಿಸಲಾಗಿದೆ. ಹೀಗಾಗಿ ಜನರ ಖಾಸಗಿತನ ಧಕ್ಕೆಯಾಗಲಿದ್ದು, ದತ್ತಾಂಶದ ಭದ್ರತೆಯ ಬಗ್ಗೆಯೂ ಗಂಭೀರವಾದ ಪ್ರಶ್ನೆಗಳಿವೆ. ತಂತ್ರಜ್ಞಾನವು ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಬಹುದು ಆದರೆ, ಭಯದ ವಾತಾವರಣವನ್ನೇ ಬಳಸಿಕೊಂಡು ಜನರ ಅನುಮತಿ ಇಲ್ಲದೆಯೇ ಅವರ ಚಲನವಲನಗಳ ಮೇಲೆ ಕಣ್ಣಿಡಬಾರದು’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT