ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ: ಸಿಎಎ ಬಗ್ಗೆ ಮೌನ

Published 15 ಮಾರ್ಚ್ 2024, 15:20 IST
Last Updated 15 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಕೇರಳದಲ್ಲಿ ಕಾಂಗ್ರೆಸ್‌ ಮತ್ತು ಸಿಪಿಎಂ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಲೋಕಸಭಾ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಿ ಮುನ್ನೆಲೆಗೆ ತಂದಿವೆ. ಆದರೆ, ಕೇರಳದ ಪತ್ತನಂತಿಟ್ಟದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಪ್ರಧಾನಿ ಅವರು ಈ ಕುರಿತು ಮೌನವಹಿಸಿದ್ದರು.

ಮೋದಿ ಅವರು ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಾಗಿ ಕೇಂದ್ರೀಕರಿಸಿ ಮಾತನಾಡಿದರು. ಜತೆಗೆ ಕೇರಳದ ಆಡಳಿತಾರೂಢ ಸಿಪಿಎಂ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.

ಕೇರಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಮೋದಿ ಅವರು, ಇತ್ತೀಚೆಗೆ ಕ್ರಿಶ್ಚಿಯನ್‌ ಪಾದ್ರಿ ಮೇಲಿನ ದಾಳಿ ಹಾಗೂ ‘ಕಾಲೇಜು ಕ್ಯಾಂಪಸ್‌ನಲ್ಲಿ ಕಮ್ಯುನಿಸ್ಟರ ಗೂಂಡಾಗಿರಿ’ಯನ್ನು ನಿದರ್ಶನಗಳಾಗಿ ಉಲ್ಲೇಖಿಸಿದರು.

ಕೇರಳದಿಂದ ಒಂದೂ ಲೋಕಸಭಾ ಸದಸ್ಯರನ್ನು ಹೊಂದಿರದ ಬಿಜೆಪಿ, ಈ ಬಾರಿ ಎರಡಂಕಿ ಸಂಖ್ಯೆಯ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಮೋದಿ ಪುನರಚ್ಚರಿಸಿದರು. ರಾಜ್ಯದ ಅಭಿವೃದ್ಧಿಗಾಗಿ ಕೇರಳದ ಜನರು ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದೂ ಅವರು ಕೋರಿದರು.

ಪತ್ತನಂತಿಟ್ಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿರುವ ಅನಿಲ್‌ ಆ್ಯಂಟನಿ (ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಪುತ್ರ) ಹಾಗೂ ಇತ್ತೀಚೆಗೆ ಬಿಜೆಪಿ ಸೇರಿದ ಪದ್ಮಜಾ ವೇಣುಗೋಪಾಲ್‌ (ಕಾಂಗ್ರೆಸ್‌ ನಾಯಕ ಕೆ. ಕರುಣಾಕರನ್‌ ಅವರ ಪತ್ರಿ) ಅವರು ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿದ್ದರು. 

ಬಿಜೆಪಿ ವಿರುದ್ಧ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ‘ಬಿಜೆಪಿಯು ದೇಶದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು. ಅಲ್ಲದೆ ಕೇರಳದಲ್ಲಿ ಸಿಎಎ ಜಾರಿಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಘೋಷಿಸಿದೆ.

‘ಕಾಂಗ್ರೆಸ್‌ ಮತ್ತು ಸಿಪಿಎಂ ಪಕ್ಷಗಳು ಮುಸ್ಲಿಂ ಮತಗಳನ್ನು ಓಲೈಸುತ್ತಿವೆ. ಹೀಗಾಗಿಯೇ ಅವು ಸಿಎಎ ಕುರಿತು ಮುಸ್ಲಿಂ ಸಮುದಾಯವನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ’ ಎಂದು ಕೇರಳದ ಬಿಜೆಪಿ ನಾಯಕರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT