ನವದೆಹಲಿ: ಕರ್ನಾಟಕದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅನ್ಯಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ(ಒಎಂಎಸ್‌ಎಸ್) ಭಾರತೀಯ ಆಹಾರ ನಿಗಮದ(ಎಫ್‌ಸಿಐ) ದಾಸ್ತಾನಿನಲ್ಲಿರುವ ಅಕ್ಕಿ, ಗೋಧಿಯನ್ನು ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಜೂನ್ 13ರಿಂದ ಸ್ಥಗಿತಗೊಳಿಸಿದ್ದಾರೆ. ಹಣದುಬ್ಬರ ಮತ್ತು ಮುಂಗಾರು ಮಳೆ ಕೊರತೆ ನಡುವೆಯೂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದೆ.
‘ಬುಧವಾರ ಕೇಂದ್ರ ಆಹಾರ ಸಚಿವ ಪೀಯೂಷ್ ಗೋಯಲ್ ಆಹಾರ ಭದ್ರತಾ ಸಭೆ ನಡೆಸಿದ್ದಾರೆ. ಬಡವರಿಗೆ ಅಕ್ಕಿ ಪೂರೈಸುವ ಬದಲು ಆದ್ಯತೆಗೆ ಅನುಗುಣವಾಗಿ ಎಥೆನಾಲ್ ಉತ್ಪಾದನೆಗೆ ಪೂರೈಸುವುದಾಗಿ ಸಭೆಯಲ್ಲಿ ಹೇಳಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
ಆಹಾರದ ಭದ್ರತೆ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಪ್ರತಿ ಕೆ.ಜಿ ಅಕ್ಕಿಗೆ ₹34 ನೀಡುವುದಾಗಿ ಹೇಳಿದೆ. ಆದರೆ, ಎಥೆನಾಲ್ ಉತ್ಪಾದಕರಿಗೆ ಕೆ.ಜಿಗೆ ₹20ರಂತೆ ಅಕ್ಕಿ ಪೂರೈಸಲು ಎಫ್‌ಸಿಐ ಮುಂದಾಗಿದೆ ಎಂದು ದೂರಿದ್ದಾರೆ.
ಕೇಂದ್ರವು ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿ ಅನ್ಯಭಾಗ್ಯವನ್ನು ದಿಕ್ಕು ತಪ್ಪಿಸಲು ಹೊರಟಿದೆ. ಆದರೆ, ಈ ಸೇಡಿನ ರಾಜಕೀಯವು ಮೋದಿ ಅವರಿಗೆ ತಿರುಗುಬಾಣವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ಆಹಾರ ಭದ್ರತೆ ಒದಗಿಸಲು ಬದ್ಧವಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.